ಏನು ಮಾಡಲಿ ಏನು ಮಾಡಲಿ ಏನು ಮಾಡಲಿ ಅಮ್ಮ?
ಪೂರ್ಣವಾಗಿ ಕಾಣಲಾರೆ ನಿನ್ನ ಭವ್ಯ ರೂಪ.
ಪಾದವನ್ನು ಕಾಣಲೆಂದು ಅಂಬೆಗಾಲಲಿ ಬಂದೆ
ಕಾಣಲಾಗದೆ ಹೋಯಿತಲ್ಲ ಮೊಗದ ಮಂದಹಾಸ.
ನುಡಿಯಲೆಂದು ಸವಿ ಮಾತು ಸಿದ್ಧವಾಗಿ ಬಂದೆ
ಓಂಕಾರ ಸಾನ್ನಿಧ್ಯದಿ ಮೂಕಳಾಗಿ ನಿಂದೆ.
ಆಲಿಂಗನ ಮಾಡ ಬಂದೆ ಆಗದಲ್ಲ ಅಯ್ಯೋ!
ವ್ಯೋಮವೆಲ್ಲಾ ನೀನೆ ಆಗಿಹೆ ಎಂತು ಹಿಡಿಯಲಮ್ಮ?
ಏನು ಮಾಡಲಿ? ಏನು ಮಾಡಲಿ? ಏನು ಮಾಡಲಿ ಅಮ್ಮ?
ನಿನ್ನಲೈಕ್ಯವಾಗದಲ್ಲದೆ ಅನ್ಯಮಾರ್ಗವಿಲ್ಲ
ನಿನ್ನಲೈಕ್ಯ ಮಾಡಿಕೊ | ನಿನ್ನಲೈಕ್ಯ ಮಾಡಿಕೊ||
ಜೀವಾತ್ಮನಿಗೆ ಪರಮಾತ್ಮನನ್ನು ಹೊಂದಲು ಆಗುತ್ತಿಲ್ಲವಲ್ಲಾ ಎಂಬ ವೇದನೆ ಕಾಡುವಾಗ ಆ ವೇದನೆಯನ್ನೇ ಭಗವಂತನೊಂದಿಗಿನ ಸಂವಾದವಾಗಿಸಿಕೊಳ್ಳುತ್ತಾನೆ. ತನ್ನ ವೇದನೆಯನ್ನೂ ತನ್ನ ಅಸಹಾಯಕತೆಯನ್ನೂ ನಿವೇದಿಸಿಕೊಳ್ಳುತ್ತಾ, ಭಗವಂತನ ಮಹಾನತೆಯನ್ನು ನೆನೆಯುತ್ತಾನೆ.
ತಾನು ಭಗವಂತನ ಜೊತೆ ತನ್ನನ್ನು ಹೋಲಿಸಿಕೊಂಡು `ಅವನು ಮೇಲು ನಾನು ಕೀಳು’ ಎಂಬಂಥ ಭಾವನೆ ತಳೆಯುವುದಕ್ಕೆ ಭಕ್ತಿಯಲ್ಲಿ ಸ್ಥಾನವಿಲ್ಲ. ಭಗವಂತ ಎಂದಿದ್ದರೂ ಅಪಾರ, ಭಕ್ತನೆಂದಿದ್ದರೂ ಅಲ್ಪ. ಈ ಭಾವದಲ್ಲಿ ಭಕ್ತನಿಗೆ ಆನಂದವಿದೆ. ಅವನು ಗೊಣಗುತ್ತಿಲ್ಲ. ದೀನತೆಯನ್ನು ನಿವೇದಿಸಿಕೊಳ್ಳುತ್ತಿದ್ದಾನೆ. ಇಷ್ಟದೈವವನ್ನು ತಾಯಿಯಾಗಿ ಕಾಣುವ ಭಕ್ತನು ಮೊರೆಯಿಡುವ ಭಾವವನ್ನು ಅಮ್ಮ ಈ ಹಾಡಿನ ಮೂಲಕ ಪ್ರಕಟಿಸುತ್ತಾ ಭಕ್ತರಿಗೆ ಭಕ್ತಿಯ ಸವಿಯನ್ನು ಊಡುತ್ತಿದ್ದಾರೆ.
“ಅಮ್ಮ, ನನಗೆ ನಿನ್ನ ಭವ್ಯರೂಪವನ್ನು ಪೂರ್ಣವಾಗಿ ಕಾಣಲಾಗುತ್ತಿಲ್ಲ. ಏನು ಮಾಡಲಿ?” ಇದು ಕೇವಲ ಭಕ್ತಿಯ ಉದ್ಗಾರವಲ್ಲ. ವಾಸ್ತವತೆ. ವೇದ ಮತ್ತು ಉಪನಿಷತ್ತುಗಳಲ್ಲಿ ಪರಮಾತ್ಮನ ವಿರಾಟ್ ರೂಪವನ್ನೂ, ಅವನ ಸರ್ವವ್ಯಾಪ್ತಭಾವವನ್ನೂ ಹಲವಾರು ವಿಧಗಳಲ್ಲಿ ವರ್ಣಿಸಲಾಗಿದೆ. ಅದೇ ರೀತಿ ಮಾನವ ಇಂದ್ರಿಯಗಳ ಇತಿಮಿತಿಯನ್ನೂ ಮನವರಿಕೆ ಮಾಡಿಕೊಡಲಾಗಿದೆ.
ಕಣ್ಣು ನೋಡುವುದಾದರೂ ಅದು ಸುತ್ತಲಿರುವ, ಪ್ರಕಟವಾಗಿರುವ ಪ್ರಪಂಚವನ್ನೇ ಪೂರ್ಣವಾಗಿ ಕಾಣಲಾರದು ಎಂದು ಅನುಭವ ತಿಳಿಸುತ್ತದೆ. ಇನ್ನು ಎಲ್ಲೆಡೆ ವ್ಯಾಪಿಸಿರುವಂಥದನ್ನು ಸಮಗ್ರವಾಗಿ ಕಾಣಲು ಕಣ್ಣಿಗೂ ಸಾಧ್ಯವಿಲ್ಲ, ಕಣ್ಣಿಗಿಂತಲೂ ಲಕ್ಷಪಟ್ಟು ಹೆಚ್ಚು ಸಾಮರ್ಥ್ಯವಿರುವ ಬಾಹ್ಯಾಕಾಶ ತಂತ್ರಜ್ಞಾನದ ಕಣ್ಣುಗಳಿಗೂ ಸಾಧ್ಯವಿಲ್ಲ. ಇನ್ನು ಪರಮಾತ್ಮನಲ್ಲಿ ಒಂದಾಗುವ ಜೀವಾತ್ಮನಿಗೆ ಕಾಣುವ ಅವಶ್ಯಕತೆಯೇ ಬರುವುದಿಲ್ಲ. ಯಾಕೆಂದರೆ `ತಾನೇ ಎಲ್ಲವೂ’ ಎಂಬ ಅನುಭೂತಿ ಅವನಲ್ಲಿ ನಿತ್ಯವಾಗಿರುತ್ತದೆ.
ಆ ಅಸಹಾಯಕತೆಯನ್ನು ವಿವರಿಸುತ್ತಾ, ತಾನು ಮಗುವೆಂಬ ಭಾವದಲ್ಲಿ ಭಕ್ತ ಹೇಳುತ್ತಿದ್ದಾನೆ: “ಅಮ್ಮ, ನಿನ್ನ ಪಾದವನ್ನು ಕಾಣಲೆಂದು ನಾನು ಅಂಬೆಗಾಲಿಡುತ್ತಾ ಬಳಿಸಾರಿದೆ. ಆದರೆ ಆಗ ನಿನ್ನ ಮುಖವನ್ನು ಕಾಣಲಾಗಲಿಲ್ಲ! ನಿನ್ನೊಂದಿಗೆ ಪ್ರೀತಿ ಸಂವಾದ ಮಾಡಲು ನಾನು ನುಡಿಗಳನ್ನು ಸಿದ್ಧಮಾಡಿಕೊಂಡು ಬಳಿಗೆ ಬಂದೆ; ಆದರೆ ಅಮ್ಮ, ನಿನ್ನದು ಪ್ರಣವಮಂತ್ರವಾದ ಓಂಕಾರದ ಸಾನ್ನಿಧ್ಯ; ಅಲ್ಲಿ ಏನೂ ನುಡಿಯಲಾರದಾಗಿ, ನಾನು ಸುಮ್ಮನೆ ಮೂಕಳಾಗಿ ನಿಂತುಬಿಟ್ಟೆ! ನಿನ್ನನ್ನು ಆಲಿಂಗಿಸಿಕೊಳ್ಳಲು ಬಂದೆ, ಅಮ್ಮ, ಆದರೆ ನೀನು ಆಕಾಶದಷ್ಟು ವಿಶಾಲ. ಆದ್ದರಿಂದ ನಿನ್ನನ್ನು ಹಿಡಿಯಲು ಆಗಲಿಲ್ಲ. ಅಮ್ಮ, ನಿನ್ನಲ್ಲಿ ಒಂದಾಗದೆ ನನಗೆ ಬೇರೆ ಮಾರ್ಗವಿಲ್ಲ. ಏನು ಮಾಡಲಿ? ಏನು ಮಾಡಲಿ, ಅಮ್ಮ? ನೀನೇ ನಿನ್ನಲ್ಲಿ ನನ್ನನ್ನು ಐಕ್ಯಮಾಡಿಕೋ. ಅದೊಂದೇ ಉಳಿದಿರುವ ದಾರಿ.”
ಈ ಎಲ್ಲಾ ಭಾವಗಳನ್ನು ಸೂಕ್ತರಾಗದಲ್ಲಿ ಮೂಡಿಸುವ ಅಮ್ಮನ ಗಾಯನವನ್ನು ಆಲಿಸುತ್ತಾ ಅರ್ಥವನ್ನು ಮನನ ಮಾಡುತ್ತಿದ್ದರೆ ಧ್ಯಾನದ ಲಾಭ ನಮ್ಮದಾಗುವುದು.

