ಜ್ಞಾನ ಅಜ್ಞಾನ -೧

ನಮಗಿಂದು ಜ್ಞಾನದ ಬಗ್ಗೆ ಅಹಂಕಾರವಿದೆ;

ಆದರೆ ಅಹಂಕಾರದ ಬಗ್ಗೆ ಜ್ಞಾನವಿಲ್ಲ,” ~ಅಮ್ಮ

‘ಜ್ಞಾನ-ಅಜ್ಞಾನದ ಬಗ್ಗೆ ಸಾಮಾನ್ಯ ಜನರಲ್ಲಿ ಅಜ್ಞಾನವಿದೆ,’ ಎಂದರೆ ಬಹುಶಃ ಇದು ಯಾರಿಗೂ ಇಷ್ಟವಾಗುವ ಮಾತಲ್ಲ. “ಇವರಿಗೆ ಹೇಗೆ ಗೊತ್ತು ಯಾರಿಗೆ ಅಜ್ಞಾನವಿದೆ ಎಂದು!?” ಎಂದು ದಬಾಯಿಸಬಹುದು. ಆದರೆ ವಾಸ್ತವ ವಿಚಾರ ಇದು. ಈ ಪದಗಳು ‘ಗೊತ್ತು -ಗೊತ್ತಿಲ್ಲ’ ಎನ್ನುವುದಕ್ಕೆ ಸಂವಾದಿ ಪದಗಳಲ್ಲ. ಈ ಪದಗಳಿಗೆ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಹಿನ್ನೆಲೆಯಿದೆ. ಈ ಪದಗಳು ‘ವ್ಯಕ್ತಿಗೆ ಅಧ್ಯಾತ್ಮ ವಿಚಾರ ತಿಳಿದಿದೆಯಾ? ವ್ಯಕ್ತಿಯು ಅಧ್ಯಾತ್ಮದಲ್ಲಿ ನೆಲೆಯಾಗಿದ್ದಾನಾ?’ ಎಂಬುದಕ್ಕೆ ಸಂಬದ್ಧವಾದುದು. ಸನಾತನ ಸಂಸ್ಕಾರದಲ್ಲಿ ವಿದ್ಯೆ ಎಂದರೇ ಆಧ್ಯಾತ್ಮವಿದ್ಯೆ; ಜ್ಞಾನವೆಂದರೇ ಅಧ್ಯಾತ್ಮದ ಬಗೆಗಿನ ತಿಳಿವಳಿಕೆ. ಅಧ್ಯಾತ್ಮ ಗೊತ್ತಿಲ್ಲದವರು, ಮತ್ತು ಅಧ್ಯಾತ್ಮ ಬೇಕಿಲ್ಲದವರು ಈ ಅರ್ಥದಲ್ಲಿ ಅಜ್ಞಾನಿ ಎನಿಸಿಕೊಳ್ಳುತ್ತಾರೆ. ಇದು ಟೆಕ್ನಿಕಲ್ ಪದಗಳಷ್ಟೇ; ಯಾರನ್ನೂ ಮೂಢರೆನ್ನಲು ಬಳಸುವ ಪದಗಳಲ್ಲ.

ಅಧ್ಯಾತ್ಮ ತಿಳಿದಿಲ್ಲದ ಅಜ್ಞಾನ ಒಂದು ಹಂತದ್ದು. ಇದಕ್ಕೂ ಮಿಗಿಲಾಗಿ, ಅನೇಕರಿಗೆ ತಮ್ಮ ಅಜ್ಞಾನದ ಬಗ್ಗೆ ತಮಗೇ ತಿಳಿಯದಿರುವುದು. ಅಮ್ಮ ಹೇಳುವರಲ್ಲ, “ನಮಗಿಂದು ಜ್ಞಾನದ ಬಗ್ಗೆ ಅಹಂಕಾರವಿದೆ; ಆದರೆ ಅಹಂಕಾರದ ಬಗ್ಗೆ ಜ್ಞಾನವಿಲ್ಲ,” ಎಂದು.

ತತ್ತ್ವಜ್ಞಾನಿ ಸಾಕ್ರೆಟಿಸ್ ಜನರಿಗೆ ತತ್ತ್ವವನ್ನು ತಿಳಿಸಲು ಎಷ್ಟೋ ಪ್ರಯತ್ನಿಸುತ್ತಿದ್ದರು. ಒಂದು ದಿನ, “ನನಗೆ ತಿಳಿಯಿತು, ನನಗೆ ತಿಳಿಯಿತು!” ಎಂದು ಕುಣಿದಾಡತೊಡಗಿದರು. ಯಾರೋ ಕೇಳಿದರಂತೆ, “ಏನು ತಿಳಿಯಿತು?” ಸಾಕ್ರೆಟಿಸ್, “ನನಗೆ ಏನೂ ತಿಳಿದಿಲ್ಲ ಎಂದು ತಿಳಿಯಿತು,” ಎಂದರಂತೆ. ಇದು ಬಹುಶಃ ಅವರು ಜನರ ಅಹಂಕಾರವನ್ನು ಮುರಿಯಲು, ಅವರನ್ನು ಜ್ಞಾನದ ಕಡೆಗೆ ಸೆಳೆಯಲು, ಆಡಿದ ಆಟವಿರಬಹುದು.

ಅನೇಕ ಸಲ ತೀರಾ ಎದುರಿಗೇ ಕಾಣುವುದರ ಬಗ್ಗೆ ಜನರಲ್ಲಿ ಅಜ್ಞಾನವಿರುತ್ತದೆ. ಅದಕ್ಕೆ ಕಾರಣ ಮನಸ್ಸಿನ ಮೊಂಡುತನ, ಮನಸ್ಸು ಹರಿತವಾಗಿಲ್ಲದಿರುವುದು. ಅಪ್ಪ ಮಗನನ್ನು, “ನಿನಗೆ ಯಾರು ಬೇಕು ಮಗನೆ? -ಸೂರ್ಯನೋ ಚಂದ್ರನೋ?” ಎಂದು ಕೇಳಿದಾಗ ಮಗ, “ಚಂದ್ರ,” ಎಂದನಂತೆ. “ಯಾಕೆ ಮಗು?” ಎಂದು ಅಪ್ಪ ಕೇಳಿದಾಗ, “ಹಗಲಲ್ಲಾದರೆ ಬೆಳಕಿರುತ್ತೆ. ರಾತ್ರಿ ಅಲ್ಲವೆ ಕತ್ತಲೆ? ಕತ್ತಲೆಯ ಹೊತ್ತಲ್ಲಿ ಅಲ್ಲವೆ ನಮಗೆ ಬೆಳಕಿನ ಅಗತ್ಯವಿರುವುದು? ಅದಿಕ್ಕೆ…” ಎಂದನಂತೆ. ಸೂರ್ಯನಿಂದಾಗಿ ಹಗಲಲ್ಲಿ ಬೆಳಕಿರುತ್ತದೆ, ಸೂರ್ಯನಿಂದಾಗಿಯೇ ಚಂದ್ರನು ಹೊಳೆಯುತ್ತಾನೆ ಎಂಬ ಸಾಮಾನ್ಯ ತಿಳುವಳಿಕೆಯಾಗಲೀ, ಸೂರ್ಯನು ಇಡೀ ಸೃಷ್ಟಿಯನ್ನು ನಡೆಸುವ ಮಹಾಶಕ್ತಿ ಎಂಬ ಆಧ್ಯಾತ್ಮಿಕ ಜ್ಞಾನವಾಗಲೀ ಆ ಮಗನಿಗೆ ಇರಲಿಲ್ಲ.

ಅತಿಯಾದ ತೀಕ್ಷ್ಣಬುದ್ಧಿಯಿಂದಲೂ ಜ್ಞಾನಕ್ಕೆ ಅಪಾಯವಿದೆ. ಹೇಗೆಂದರೆ: ಒಂದಷ್ಟು ಕಾಲೇಜು ವಿದ್ಯಾರ್ಥಿಗಳು ಯಾತ್ರೆಮಾಡುತ್ತಾ ಒಂದು ಹಳ್ಳಿಗೆ ಬಂದರು. ಒಬ್ಬ ರೈತ ಗಾಣದೆತ್ತುಗಳನ್ನು ಉರುಳುಕಲ್ಲುಗಳಿಗೆ ಕಟ್ಟಿ, ಕಬ್ಬಿನ ರಸ ತೆಗೆಯುತ್ತಿದ್ದ. ಅವನ ಅಂಗಳದಲ್ಲಿ ಕುಳಿತ ಯುವಕರು ರೈತನ ಕೆಲಸಕಾರ್ಯಗಳ ಬಗ್ಗೆ ಕೇಳಿ ಕೇಳಿ ತಿಳಿದುಕೊಳ್ಳುತ್ತಿದ್ದರು. “ಅಲ್ಲ! ನೀವು ಹೀಗೆ ಎತ್ತುಗಳನ್ನು ಕಟ್ಟಿ ಮನೆಯೊಳಗೆ ಹೋದರೆ, ಅವು ಕೆಲಸ ಮಾಡದೆ ಸುಮ್ಮನೆ ನಿಂತುಬಿಡುವುದಿಲ್ಲವೆ?” ರೈತ ವಿವರಿಸಿದರು, “ಛೆ! ಪಾಪ! ಎತ್ತುಗಳು ಹಾಗೆ ಮಾಡೋದಿಲ್ಲ. ಅಲ್ಲದೆ, ನಮಗೆ ಎತ್ತುಗಳ ಕೊರಳಲ್ಲಿರುವ ಗಂಟೆಯ ಶಬ್ದ ಕೇಳಿಸುತ್ತಾ ಇರುತ್ತೆ.” ಒಬ್ಬ ವಿದ್ಯಾರ್ಥಿ ತಾನು ತುಂಬಾ ಜಾಣ ಎಂದುಕೊಂಡಿದ್ದವ, “ಒಂದು ವೇಳೆ ಎತ್ತುಗಳು ಕೆಲಸ ನಿಲ್ಲಿಸಿ, ಸುಮ್ಮನೆ ನಿಂತು, ಕೊರಳ ಗಂಟೆಯನ್ನು ಆಡಿಸುತ್ತಿದ್ದರೆ, ಆಗ?” ಎಂದನು. ರೈತಮಹಾಶಯನಿಗೆ ‘ಮುಗ್ಧತೆ ಎಷ್ಟು ದೂರ ಹೋಗಿಬಿಟ್ಟಿದೆ!’ ಎನಿಸಿ, ವಿಷಾದಿಂದ ನುಡಿದರು, “ಮಗು, ಎತ್ತುಗಳು ಕಾಲೇಜಿಗೆ ಹೋಗಿಲ್ಲ. ಆದ್ದರಿಂದ ಅವು ಹಾಗೆಲ್ಲಾ ಮಾಡೋದಿಲ್ಲ!”

ಶಾಸ್ತçಗ್ರಂಥಗಳನ್ನು ಅಭ್ಯಾಸ ಮಾಡಿ, ಅಧ್ಯಾತ್ಮ ತಿಳಿಸುವ ವಿಚಾರಗಳನ್ನು ಅರ್ಥಮಾಡಿಕೊಂಡರೂ ವ್ಯಕ್ತಿಯು ತತ್ವಶಃ `ಜ್ಞಾನಿ’ ಎಂದು ಎನಿಸಿಕೊಳ್ಳುವುದಿಲ್ಲ. ಆದರೆ ಅಷ್ಟರಮಟ್ಟಿಗೆ ಆತ ತಿಳಿದವನಾಗುತ್ತಾನೆ.

ಶ್ರೀ ಶಂಕರಾಚಾರ್ಯರ ಸುಪ್ರಸಿದ್ಧ `ನಿರ್ವಾಣ ಷಟ್ಕ’ವನ್ನು ಗಮನಿಸಿರಿ. “ಮನೋಬುದ್ಧ್ಯಹಂಕಾರ ಚಿತ್ತಾನಿ ನಾಹಂ | ಶಿವೋಹಂ ಶಿವೋಹಂ ||”

ತಾನು ಶಿವನೆಂಬ ನೆಲೆಯನ್ನು ತಲುಪಿದಾತ ತಾನು ಮನಸ್ಸಲ್ಲ, ತಾನು ಬುದ್ಧಿಯಲ್ಲ, ತಾನು ಅಹಂಕಾರವಲ್ಲ, ತಾನು ಚಿತ್ತವೂ ಅಲ್ಲ ಎನ್ನುತ್ತಿದ್ದಾನೆ. ಮುಂದಿನ ಸಾಲುಗಳಲ್ಲಿ ತಾನು ಇಂದ್ರಿಯವಲ್ಲ, ತಾನು ಪಂಚಕೋಶವಲ್ಲ ಮುಂತಾಗಿ ನುಡಿಯುವನು. ಇಲ್ಲಿ ಮಹತ್ವದ ವಿಚಾರವೆಂದರೆ, `ತಾನು ಮನಸ್ಸಲ್ಲ,’ ಎನ್ನುವಾಗ ತನಗೆ `ಮನಸ್ಸು ಎಂದರೇನು?’ ಎಂದು ತಿಳಿದಿರಬೇಕು. `ತಾನು ಬುದ್ಧಿಯಲ್ಲ,’ ಎನ್ನುವಾಗ ತನಗೆ `ಬುದ್ಧಿ ಎಂದರೇನು?’ ಎಂಬ ತಿಳುವಳಿಕೆ ಇರಬೇಕು. `ತಾನು ಅಹಂಕಾರವಲ್ಲ,’ ಎನ್ನುವಾಗ ತನಗೆ `ಅಹಂಕಾರ ಎಂದರೇನು?’ ಎಂದು ತಿಳಿದಿರಬೇಕು. `ಅಹಂ ಬ್ರಹ್ಮಾಸ್ಮಿ,’ ಎನ್ನುವ ತತ್ವ ಅರ್ಥವಾಗಿರಬೇಕು. ಅದು ಅನುಭವವಾಗಿರಬೇಕು.

ಅದೇ ರೀತಿ, `ತಾನು ಇಂದ್ರಿಯವಲ್ಲ,’ ಎನ್ನುವಾಗ ತನಗೆ ಇಂದ್ರಿಯಗಳ ಇತಿಮಿತಿಗಳ ಬಗ್ಗೆ ತಿಳಿದಿರಬೇಕು, ಆ ಕಾರಣದಿಂದ ಇಂದ್ರಿಯಗಳ ಜೊತೆಗಿನ ತಾದಾತ್ಮ್ಯವನ್ನು ತ್ಯಜಿಸಿರಬೇಕು. `ತಾನು ಪಂಚಕೋಶಗಳಲ್ಲ,’ ಎನ್ನುವಾಗ ಅನ್ನಮಯ ಕೋಶಾದಿ ಐದೂ ಕೋಶಗಳ ಬಗ್ಗೆ, ಅಂದರೆ ಇಡೀ ಮಾನವ ಅಸ್ತಿತ್ವದ ಬಗ್ಗೆ ತಿಳಿದು, `ಇವುಗಳು ತಾನಲ್ಲ,’ ಎನ್ನುವ ಸ್ಥಿತಿಯಲ್ಲಿ ತನಗೆ `ತಾನು ಆತ್ಮ’ನೆಂಬ ಸತ್ಯಸಾಕ್ಷಾತ್ಕಾರ ಆಗಿರಬೇಕು. ಆಧ್ಯಾತ್ಮದಲ್ಲಿ ಅಂಥವನು `ಜ್ಞಾನಿ,’ ಎನಿಸಿಕೊಳ್ಳುತ್ತಾನೆ.

ಶಾಸ್ತ್ರಾಧ್ಯಯನ ಮಾಡಿದವನು ಮನುಷ್ಯಜನ್ಮದ ಗುರಿ, ಪರಮಾತ್ಮ ತತ್ತ್ವ, ಸೃಷ್ಟಿ, ಸಾಧನೆ, ಮುಂತಾದ ಉನ್ನತ ವಿಚಾರಗಳನ್ನು ಅರಿಯುತ್ತಾನೆ. ಆದರೆ ಇವನ್ನು ಬುದ್ಧಿಯಿಂದ ಮಾತ್ರ ಅರಿತರೆ ಸಾಲದೆಂದು ಸ್ವಯಂ ಶಾಸ್ತçಗಳೇ ಹೇಳುತ್ತವೆ. ಅಮ್ಮ ಹೇಳುತ್ತಾರೆ, “ಮುಂಬೈಗೆ ದಾರಿ ಯಾವುದು ಎಂದು ತಿಳಿದಮಾತ್ರಕ್ಕೆ ನಾವು ಮುಂಬೈ ತಲುಪುವುದಿಲ್ಲ. ಅದಕ್ಕಾಗಿ ಯಾತ್ರೆಯನ್ನೇ ಮಾಡಬೇಕು,” ಎಂದು.

ಇಲ್ಲಿ ಯಾತ್ರೆ ಎಂದರೆ ನಮ್ಮ ಯತ್ನ, ಮಾಡಬೇಕಾದ ಸಾಧನೆ ಎಂದರ್ಥ.