Category: Kannada

  • ಜ್ಞಾನ ಅಜ್ಞಾನ -೧

    ನಮಗಿಂದು ಜ್ಞಾನದ ಬಗ್ಗೆ ಅಹಂಕಾರವಿದೆ;

    ಆದರೆ ಅಹಂಕಾರದ ಬಗ್ಗೆ ಜ್ಞಾನವಿಲ್ಲ,” ~ಅಮ್ಮ

    ‘ಜ್ಞಾನ-ಅಜ್ಞಾನದ ಬಗ್ಗೆ ಸಾಮಾನ್ಯ ಜನರಲ್ಲಿ ಅಜ್ಞಾನವಿದೆ,’ ಎಂದರೆ ಬಹುಶಃ ಇದು ಯಾರಿಗೂ ಇಷ್ಟವಾಗುವ ಮಾತಲ್ಲ. “ಇವರಿಗೆ ಹೇಗೆ ಗೊತ್ತು ಯಾರಿಗೆ ಅಜ್ಞಾನವಿದೆ ಎಂದು!?” ಎಂದು ದಬಾಯಿಸಬಹುದು. ಆದರೆ ವಾಸ್ತವ ವಿಚಾರ ಇದು. ಈ ಪದಗಳು ‘ಗೊತ್ತು -ಗೊತ್ತಿಲ್ಲ’ ಎನ್ನುವುದಕ್ಕೆ ಸಂವಾದಿ ಪದಗಳಲ್ಲ. ಈ ಪದಗಳಿಗೆ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಹಿನ್ನೆಲೆಯಿದೆ. ಈ ಪದಗಳು ‘ವ್ಯಕ್ತಿಗೆ ಅಧ್ಯಾತ್ಮ ವಿಚಾರ ತಿಳಿದಿದೆಯಾ? ವ್ಯಕ್ತಿಯು ಅಧ್ಯಾತ್ಮದಲ್ಲಿ ನೆಲೆಯಾಗಿದ್ದಾನಾ?’ ಎಂಬುದಕ್ಕೆ ಸಂಬದ್ಧವಾದುದು. ಸನಾತನ ಸಂಸ್ಕಾರದಲ್ಲಿ ವಿದ್ಯೆ ಎಂದರೇ ಆಧ್ಯಾತ್ಮವಿದ್ಯೆ; ಜ್ಞಾನವೆಂದರೇ ಅಧ್ಯಾತ್ಮದ ಬಗೆಗಿನ ತಿಳಿವಳಿಕೆ. ಅಧ್ಯಾತ್ಮ ಗೊತ್ತಿಲ್ಲದವರು, ಮತ್ತು ಅಧ್ಯಾತ್ಮ ಬೇಕಿಲ್ಲದವರು ಈ ಅರ್ಥದಲ್ಲಿ ಅಜ್ಞಾನಿ ಎನಿಸಿಕೊಳ್ಳುತ್ತಾರೆ. ಇದು ಟೆಕ್ನಿಕಲ್ ಪದಗಳಷ್ಟೇ; ಯಾರನ್ನೂ ಮೂಢರೆನ್ನಲು ಬಳಸುವ ಪದಗಳಲ್ಲ.

    ಅಧ್ಯಾತ್ಮ ತಿಳಿದಿಲ್ಲದ ಅಜ್ಞಾನ ಒಂದು ಹಂತದ್ದು. ಇದಕ್ಕೂ ಮಿಗಿಲಾಗಿ, ಅನೇಕರಿಗೆ ತಮ್ಮ ಅಜ್ಞಾನದ ಬಗ್ಗೆ ತಮಗೇ ತಿಳಿಯದಿರುವುದು. ಅಮ್ಮ ಹೇಳುವರಲ್ಲ, “ನಮಗಿಂದು ಜ್ಞಾನದ ಬಗ್ಗೆ ಅಹಂಕಾರವಿದೆ; ಆದರೆ ಅಹಂಕಾರದ ಬಗ್ಗೆ ಜ್ಞಾನವಿಲ್ಲ,” ಎಂದು.

    ತತ್ತ್ವಜ್ಞಾನಿ ಸಾಕ್ರೆಟಿಸ್ ಜನರಿಗೆ ತತ್ತ್ವವನ್ನು ತಿಳಿಸಲು ಎಷ್ಟೋ ಪ್ರಯತ್ನಿಸುತ್ತಿದ್ದರು. ಒಂದು ದಿನ, “ನನಗೆ ತಿಳಿಯಿತು, ನನಗೆ ತಿಳಿಯಿತು!” ಎಂದು ಕುಣಿದಾಡತೊಡಗಿದರು. ಯಾರೋ ಕೇಳಿದರಂತೆ, “ಏನು ತಿಳಿಯಿತು?” ಸಾಕ್ರೆಟಿಸ್, “ನನಗೆ ಏನೂ ತಿಳಿದಿಲ್ಲ ಎಂದು ತಿಳಿಯಿತು,” ಎಂದರಂತೆ. ಇದು ಬಹುಶಃ ಅವರು ಜನರ ಅಹಂಕಾರವನ್ನು ಮುರಿಯಲು, ಅವರನ್ನು ಜ್ಞಾನದ ಕಡೆಗೆ ಸೆಳೆಯಲು, ಆಡಿದ ಆಟವಿರಬಹುದು.

    ಅನೇಕ ಸಲ ತೀರಾ ಎದುರಿಗೇ ಕಾಣುವುದರ ಬಗ್ಗೆ ಜನರಲ್ಲಿ ಅಜ್ಞಾನವಿರುತ್ತದೆ. ಅದಕ್ಕೆ ಕಾರಣ ಮನಸ್ಸಿನ ಮೊಂಡುತನ, ಮನಸ್ಸು ಹರಿತವಾಗಿಲ್ಲದಿರುವುದು. ಅಪ್ಪ ಮಗನನ್ನು, “ನಿನಗೆ ಯಾರು ಬೇಕು ಮಗನೆ? -ಸೂರ್ಯನೋ ಚಂದ್ರನೋ?” ಎಂದು ಕೇಳಿದಾಗ ಮಗ, “ಚಂದ್ರ,” ಎಂದನಂತೆ. “ಯಾಕೆ ಮಗು?” ಎಂದು ಅಪ್ಪ ಕೇಳಿದಾಗ, “ಹಗಲಲ್ಲಾದರೆ ಬೆಳಕಿರುತ್ತೆ. ರಾತ್ರಿ ಅಲ್ಲವೆ ಕತ್ತಲೆ? ಕತ್ತಲೆಯ ಹೊತ್ತಲ್ಲಿ ಅಲ್ಲವೆ ನಮಗೆ ಬೆಳಕಿನ ಅಗತ್ಯವಿರುವುದು? ಅದಿಕ್ಕೆ…” ಎಂದನಂತೆ. ಸೂರ್ಯನಿಂದಾಗಿ ಹಗಲಲ್ಲಿ ಬೆಳಕಿರುತ್ತದೆ, ಸೂರ್ಯನಿಂದಾಗಿಯೇ ಚಂದ್ರನು ಹೊಳೆಯುತ್ತಾನೆ ಎಂಬ ಸಾಮಾನ್ಯ ತಿಳುವಳಿಕೆಯಾಗಲೀ, ಸೂರ್ಯನು ಇಡೀ ಸೃಷ್ಟಿಯನ್ನು ನಡೆಸುವ ಮಹಾಶಕ್ತಿ ಎಂಬ ಆಧ್ಯಾತ್ಮಿಕ ಜ್ಞಾನವಾಗಲೀ ಆ ಮಗನಿಗೆ ಇರಲಿಲ್ಲ.

    ಅತಿಯಾದ ತೀಕ್ಷ್ಣಬುದ್ಧಿಯಿಂದಲೂ ಜ್ಞಾನಕ್ಕೆ ಅಪಾಯವಿದೆ. ಹೇಗೆಂದರೆ: ಒಂದಷ್ಟು ಕಾಲೇಜು ವಿದ್ಯಾರ್ಥಿಗಳು ಯಾತ್ರೆಮಾಡುತ್ತಾ ಒಂದು ಹಳ್ಳಿಗೆ ಬಂದರು. ಒಬ್ಬ ರೈತ ಗಾಣದೆತ್ತುಗಳನ್ನು ಉರುಳುಕಲ್ಲುಗಳಿಗೆ ಕಟ್ಟಿ, ಕಬ್ಬಿನ ರಸ ತೆಗೆಯುತ್ತಿದ್ದ. ಅವನ ಅಂಗಳದಲ್ಲಿ ಕುಳಿತ ಯುವಕರು ರೈತನ ಕೆಲಸಕಾರ್ಯಗಳ ಬಗ್ಗೆ ಕೇಳಿ ಕೇಳಿ ತಿಳಿದುಕೊಳ್ಳುತ್ತಿದ್ದರು. “ಅಲ್ಲ! ನೀವು ಹೀಗೆ ಎತ್ತುಗಳನ್ನು ಕಟ್ಟಿ ಮನೆಯೊಳಗೆ ಹೋದರೆ, ಅವು ಕೆಲಸ ಮಾಡದೆ ಸುಮ್ಮನೆ ನಿಂತುಬಿಡುವುದಿಲ್ಲವೆ?” ರೈತ ವಿವರಿಸಿದರು, “ಛೆ! ಪಾಪ! ಎತ್ತುಗಳು ಹಾಗೆ ಮಾಡೋದಿಲ್ಲ. ಅಲ್ಲದೆ, ನಮಗೆ ಎತ್ತುಗಳ ಕೊರಳಲ್ಲಿರುವ ಗಂಟೆಯ ಶಬ್ದ ಕೇಳಿಸುತ್ತಾ ಇರುತ್ತೆ.” ಒಬ್ಬ ವಿದ್ಯಾರ್ಥಿ ತಾನು ತುಂಬಾ ಜಾಣ ಎಂದುಕೊಂಡಿದ್ದವ, “ಒಂದು ವೇಳೆ ಎತ್ತುಗಳು ಕೆಲಸ ನಿಲ್ಲಿಸಿ, ಸುಮ್ಮನೆ ನಿಂತು, ಕೊರಳ ಗಂಟೆಯನ್ನು ಆಡಿಸುತ್ತಿದ್ದರೆ, ಆಗ?” ಎಂದನು. ರೈತಮಹಾಶಯನಿಗೆ ‘ಮುಗ್ಧತೆ ಎಷ್ಟು ದೂರ ಹೋಗಿಬಿಟ್ಟಿದೆ!’ ಎನಿಸಿ, ವಿಷಾದಿಂದ ನುಡಿದರು, “ಮಗು, ಎತ್ತುಗಳು ಕಾಲೇಜಿಗೆ ಹೋಗಿಲ್ಲ. ಆದ್ದರಿಂದ ಅವು ಹಾಗೆಲ್ಲಾ ಮಾಡೋದಿಲ್ಲ!”

    ಶಾಸ್ತçಗ್ರಂಥಗಳನ್ನು ಅಭ್ಯಾಸ ಮಾಡಿ, ಅಧ್ಯಾತ್ಮ ತಿಳಿಸುವ ವಿಚಾರಗಳನ್ನು ಅರ್ಥಮಾಡಿಕೊಂಡರೂ ವ್ಯಕ್ತಿಯು ತತ್ವಶಃ `ಜ್ಞಾನಿ’ ಎಂದು ಎನಿಸಿಕೊಳ್ಳುವುದಿಲ್ಲ. ಆದರೆ ಅಷ್ಟರಮಟ್ಟಿಗೆ ಆತ ತಿಳಿದವನಾಗುತ್ತಾನೆ.

    ಶ್ರೀ ಶಂಕರಾಚಾರ್ಯರ ಸುಪ್ರಸಿದ್ಧ `ನಿರ್ವಾಣ ಷಟ್ಕ’ವನ್ನು ಗಮನಿಸಿರಿ. “ಮನೋಬುದ್ಧ್ಯಹಂಕಾರ ಚಿತ್ತಾನಿ ನಾಹಂ | ಶಿವೋಹಂ ಶಿವೋಹಂ ||”

    ತಾನು ಶಿವನೆಂಬ ನೆಲೆಯನ್ನು ತಲುಪಿದಾತ ತಾನು ಮನಸ್ಸಲ್ಲ, ತಾನು ಬುದ್ಧಿಯಲ್ಲ, ತಾನು ಅಹಂಕಾರವಲ್ಲ, ತಾನು ಚಿತ್ತವೂ ಅಲ್ಲ ಎನ್ನುತ್ತಿದ್ದಾನೆ. ಮುಂದಿನ ಸಾಲುಗಳಲ್ಲಿ ತಾನು ಇಂದ್ರಿಯವಲ್ಲ, ತಾನು ಪಂಚಕೋಶವಲ್ಲ ಮುಂತಾಗಿ ನುಡಿಯುವನು. ಇಲ್ಲಿ ಮಹತ್ವದ ವಿಚಾರವೆಂದರೆ, `ತಾನು ಮನಸ್ಸಲ್ಲ,’ ಎನ್ನುವಾಗ ತನಗೆ `ಮನಸ್ಸು ಎಂದರೇನು?’ ಎಂದು ತಿಳಿದಿರಬೇಕು. `ತಾನು ಬುದ್ಧಿಯಲ್ಲ,’ ಎನ್ನುವಾಗ ತನಗೆ `ಬುದ್ಧಿ ಎಂದರೇನು?’ ಎಂಬ ತಿಳುವಳಿಕೆ ಇರಬೇಕು. `ತಾನು ಅಹಂಕಾರವಲ್ಲ,’ ಎನ್ನುವಾಗ ತನಗೆ `ಅಹಂಕಾರ ಎಂದರೇನು?’ ಎಂದು ತಿಳಿದಿರಬೇಕು. `ಅಹಂ ಬ್ರಹ್ಮಾಸ್ಮಿ,’ ಎನ್ನುವ ತತ್ವ ಅರ್ಥವಾಗಿರಬೇಕು. ಅದು ಅನುಭವವಾಗಿರಬೇಕು.

    ಅದೇ ರೀತಿ, `ತಾನು ಇಂದ್ರಿಯವಲ್ಲ,’ ಎನ್ನುವಾಗ ತನಗೆ ಇಂದ್ರಿಯಗಳ ಇತಿಮಿತಿಗಳ ಬಗ್ಗೆ ತಿಳಿದಿರಬೇಕು, ಆ ಕಾರಣದಿಂದ ಇಂದ್ರಿಯಗಳ ಜೊತೆಗಿನ ತಾದಾತ್ಮ್ಯವನ್ನು ತ್ಯಜಿಸಿರಬೇಕು. `ತಾನು ಪಂಚಕೋಶಗಳಲ್ಲ,’ ಎನ್ನುವಾಗ ಅನ್ನಮಯ ಕೋಶಾದಿ ಐದೂ ಕೋಶಗಳ ಬಗ್ಗೆ, ಅಂದರೆ ಇಡೀ ಮಾನವ ಅಸ್ತಿತ್ವದ ಬಗ್ಗೆ ತಿಳಿದು, `ಇವುಗಳು ತಾನಲ್ಲ,’ ಎನ್ನುವ ಸ್ಥಿತಿಯಲ್ಲಿ ತನಗೆ `ತಾನು ಆತ್ಮ’ನೆಂಬ ಸತ್ಯಸಾಕ್ಷಾತ್ಕಾರ ಆಗಿರಬೇಕು. ಆಧ್ಯಾತ್ಮದಲ್ಲಿ ಅಂಥವನು `ಜ್ಞಾನಿ,’ ಎನಿಸಿಕೊಳ್ಳುತ್ತಾನೆ.

    ಶಾಸ್ತ್ರಾಧ್ಯಯನ ಮಾಡಿದವನು ಮನುಷ್ಯಜನ್ಮದ ಗುರಿ, ಪರಮಾತ್ಮ ತತ್ತ್ವ, ಸೃಷ್ಟಿ, ಸಾಧನೆ, ಮುಂತಾದ ಉನ್ನತ ವಿಚಾರಗಳನ್ನು ಅರಿಯುತ್ತಾನೆ. ಆದರೆ ಇವನ್ನು ಬುದ್ಧಿಯಿಂದ ಮಾತ್ರ ಅರಿತರೆ ಸಾಲದೆಂದು ಸ್ವಯಂ ಶಾಸ್ತçಗಳೇ ಹೇಳುತ್ತವೆ. ಅಮ್ಮ ಹೇಳುತ್ತಾರೆ, “ಮುಂಬೈಗೆ ದಾರಿ ಯಾವುದು ಎಂದು ತಿಳಿದಮಾತ್ರಕ್ಕೆ ನಾವು ಮುಂಬೈ ತಲುಪುವುದಿಲ್ಲ. ಅದಕ್ಕಾಗಿ ಯಾತ್ರೆಯನ್ನೇ ಮಾಡಬೇಕು,” ಎಂದು.

    ಇಲ್ಲಿ ಯಾತ್ರೆ ಎಂದರೆ ನಮ್ಮ ಯತ್ನ, ಮಾಡಬೇಕಾದ ಸಾಧನೆ ಎಂದರ್ಥ.

  • ಗಾನಾಮೃತ

    ಗಾನಾಮೃತ

    ಜೀವಾತ್ಮನಿಗೆ ಪರಮಾತ್ಮನನ್ನು ಹೊಂದಲು ಆಗುತ್ತಿಲ್ಲವಲ್ಲಾ ಎಂಬ ವೇದನೆ ಕಾಡುವಾಗ ಆ ವೇದನೆಯನ್ನೇ ಭಗವಂತನೊಂದಿಗಿನ ಸಂವಾದವಾಗಿಸಿಕೊಳ್ಳುತ್ತಾನೆ. ತನ್ನ ವೇದನೆಯನ್ನೂ ತನ್ನ ಅಸಹಾಯಕತೆಯನ್ನೂ ನಿವೇದಿಸಿಕೊಳ್ಳುತ್ತಾ, ಭಗವಂತನ ಮಹಾನತೆಯನ್ನು ನೆನೆಯುತ್ತಾನೆ.

    ತಾನು ಭಗವಂತನ ಜೊತೆ ತನ್ನನ್ನು ಹೋಲಿಸಿಕೊಂಡು `ಅವನು ಮೇಲು ನಾನು ಕೀಳು’ ಎಂಬಂಥ ಭಾವನೆ ತಳೆಯುವುದಕ್ಕೆ ಭಕ್ತಿಯಲ್ಲಿ ಸ್ಥಾನವಿಲ್ಲ. ಭಗವಂತ ಎಂದಿದ್ದರೂ ಅಪಾರ, ಭಕ್ತನೆಂದಿದ್ದರೂ ಅಲ್ಪ. ಈ ಭಾವದಲ್ಲಿ ಭಕ್ತನಿಗೆ ಆನಂದವಿದೆ. ಅವನು ಗೊಣಗುತ್ತಿಲ್ಲ. ದೀನತೆಯನ್ನು ನಿವೇದಿಸಿಕೊಳ್ಳುತ್ತಿದ್ದಾನೆ. ಇಷ್ಟದೈವವನ್ನು ತಾಯಿಯಾಗಿ ಕಾಣುವ ಭಕ್ತನು ಮೊರೆಯಿಡುವ ಭಾವವನ್ನು ಅಮ್ಮ ಈ ಹಾಡಿನ ಮೂಲಕ ಪ್ರಕಟಿಸುತ್ತಾ ಭಕ್ತರಿಗೆ ಭಕ್ತಿಯ ಸವಿಯನ್ನು ಊಡುತ್ತಿದ್ದಾರೆ.

    “ಅಮ್ಮ, ನನಗೆ ನಿನ್ನ ಭವ್ಯರೂಪವನ್ನು ಪೂರ್ಣವಾಗಿ ಕಾಣಲಾಗುತ್ತಿಲ್ಲ. ಏನು ಮಾಡಲಿ?” ಇದು ಕೇವಲ ಭಕ್ತಿಯ ಉದ್ಗಾರವಲ್ಲ. ವಾಸ್ತವತೆ. ವೇದ ಮತ್ತು ಉಪನಿಷತ್ತುಗಳಲ್ಲಿ ಪರಮಾತ್ಮನ ವಿರಾಟ್ ರೂಪವನ್ನೂ, ಅವನ ಸರ್ವವ್ಯಾಪ್ತಭಾವವನ್ನೂ ಹಲವಾರು ವಿಧಗಳಲ್ಲಿ ವರ್ಣಿಸಲಾಗಿದೆ. ಅದೇ ರೀತಿ ಮಾನವ ಇಂದ್ರಿಯಗಳ ಇತಿಮಿತಿಯನ್ನೂ ಮನವರಿಕೆ ಮಾಡಿಕೊಡಲಾಗಿದೆ.

    ಕಣ್ಣು ನೋಡುವುದಾದರೂ ಅದು ಸುತ್ತಲಿರುವ, ಪ್ರಕಟವಾಗಿರುವ ಪ್ರಪಂಚವನ್ನೇ ಪೂರ್ಣವಾಗಿ ಕಾಣಲಾರದು ಎಂದು ಅನುಭವ ತಿಳಿಸುತ್ತದೆ. ಇನ್ನು ಎಲ್ಲೆಡೆ ವ್ಯಾಪಿಸಿರುವಂಥದನ್ನು ಸಮಗ್ರವಾಗಿ ಕಾಣಲು ಕಣ್ಣಿಗೂ ಸಾಧ್ಯವಿಲ್ಲ, ಕಣ್ಣಿಗಿಂತಲೂ ಲಕ್ಷಪಟ್ಟು ಹೆಚ್ಚು ಸಾಮರ್ಥ್ಯವಿರುವ ಬಾಹ್ಯಾಕಾಶ ತಂತ್ರಜ್ಞಾನದ ಕಣ್ಣುಗಳಿಗೂ ಸಾಧ್ಯವಿಲ್ಲ. ಇನ್ನು ಪರಮಾತ್ಮನಲ್ಲಿ ಒಂದಾಗುವ ಜೀವಾತ್ಮನಿಗೆ ಕಾಣುವ ಅವಶ್ಯಕತೆಯೇ ಬರುವುದಿಲ್ಲ. ಯಾಕೆಂದರೆ `ತಾನೇ ಎಲ್ಲವೂ’ ಎಂಬ ಅನುಭೂತಿ ಅವನಲ್ಲಿ ನಿತ್ಯವಾಗಿರುತ್ತದೆ.

    ಆ ಅಸಹಾಯಕತೆಯನ್ನು ವಿವರಿಸುತ್ತಾ, ತಾನು ಮಗುವೆಂಬ ಭಾವದಲ್ಲಿ ಭಕ್ತ ಹೇಳುತ್ತಿದ್ದಾನೆ: “ಅಮ್ಮ, ನಿನ್ನ ಪಾದವನ್ನು ಕಾಣಲೆಂದು ನಾನು ಅಂಬೆಗಾಲಿಡುತ್ತಾ ಬಳಿಸಾರಿದೆ. ಆದರೆ ಆಗ ನಿನ್ನ ಮುಖವನ್ನು ಕಾಣಲಾಗಲಿಲ್ಲ! ನಿನ್ನೊಂದಿಗೆ ಪ್ರೀತಿ ಸಂವಾದ ಮಾಡಲು ನಾನು ನುಡಿಗಳನ್ನು ಸಿದ್ಧಮಾಡಿಕೊಂಡು ಬಳಿಗೆ ಬಂದೆ; ಆದರೆ ಅಮ್ಮ, ನಿನ್ನದು ಪ್ರಣವಮಂತ್ರವಾದ ಓಂಕಾರದ ಸಾನ್ನಿಧ್ಯ; ಅಲ್ಲಿ ಏನೂ ನುಡಿಯಲಾರದಾಗಿ, ನಾನು ಸುಮ್ಮನೆ ಮೂಕಳಾಗಿ ನಿಂತುಬಿಟ್ಟೆ! ನಿನ್ನನ್ನು ಆಲಿಂಗಿಸಿಕೊಳ್ಳಲು ಬಂದೆ, ಅಮ್ಮ, ಆದರೆ ನೀನು ಆಕಾಶದಷ್ಟು ವಿಶಾಲ. ಆದ್ದರಿಂದ ನಿನ್ನನ್ನು ಹಿಡಿಯಲು ಆಗಲಿಲ್ಲ. ಅಮ್ಮ, ನಿನ್ನಲ್ಲಿ ಒಂದಾಗದೆ ನನಗೆ ಬೇರೆ ಮಾರ್ಗವಿಲ್ಲ. ಏನು ಮಾಡಲಿ? ಏನು ಮಾಡಲಿ, ಅಮ್ಮ? ನೀನೇ ನಿನ್ನಲ್ಲಿ ನನ್ನನ್ನು ಐಕ್ಯಮಾಡಿಕೋ. ಅದೊಂದೇ ಉಳಿದಿರುವ ದಾರಿ.”

    ಈ ಎಲ್ಲಾ ಭಾವಗಳನ್ನು ಸೂಕ್ತರಾಗದಲ್ಲಿ ಮೂಡಿಸುವ ಅಮ್ಮನ ಗಾಯನವನ್ನು ಆಲಿಸುತ್ತಾ ಅರ್ಥವನ್ನು ಮನನ ಮಾಡುತ್ತಿದ್ದರೆ ಧ್ಯಾನದ ಲಾಭ ನಮ್ಮದಾಗುವುದು.

  • ವಿಶ್ವಾಮಿತ್ರ ಮತ್ತು                ವಸಿಷ್ಠ ಮಹರ್ಷಿಗಳು

    ವಿಶ್ವಾಮಿತ್ರ ಮತ್ತು ವಸಿಷ್ಠ ಮಹರ್ಷಿಗಳು

    ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಪ್ರಾಚೀನ ಕಾಲದ ಋಷಿಗಳದು ಅತ್ಯಂತ ಪ್ರಮುಖ ಪಾತ್ರ. ಅದರಲ್ಲೂ ವಿಶ್ವಾಮಿತ್ರ, ವಸಿಷ್ಠರಂತೂ ಶಾಸ್ತç ಪುರಾಣ ಇತಿಹಾಸಗಳೆಲ್ಲದರಲ್ಲಿ ಬಹುಮುಖ್ಯ ಭೂಮಿಕೆಯನ್ನು ನಿಭಾಯಿಸುವ ಮಹರ್ಷಿಗಳು.  

    ವಿಶ್ವಾಮಿತ್ರ ಮತ್ತು ವಸಿಷ್ಠರ ನಡುವಿನ ವಿರಸ ಹಾಗೂ ವಿಷಮ ಘಟನೆಗಳು ಅನೇಕವಿದ್ದು, ಅವು ತತ್ತ್ವಗಳನ್ನು ಕಲಿಸುವಂಥವಾಗಿವೆ. ವಿರಸ ಮುಗಿದು ವಿಶ್ವಾಮಿತ್ರರು ಬ್ರಹ್ಮರ್ಷಿಯಾದ ಕಥೆ ಹೀಗಿದೆ.

    ಮಹಾನ್ ತಪಸ್ವಿಯಾದ ವಿಶ್ವಾಮಿತ್ರರ ಸಾಮರ್ಥ್ಯ ಅಪಾರವಾಗಿತ್ತು. ತಮ್ಮ ತಪೋಬಲದಿಂದ ಅವರು ಸತ್ಯವ್ರತನೆಂಬ ರಾಜನಿಗಾಗಿ ಪ್ರತ್ಯೇಕ ತ್ರಿಶಂಖು ಸ್ವರ್ಗವನ್ನೇ ನಿರ್ಮಿಸಿಕೊಟ್ಟಿದ್ದರು. ಆದರೆ ಅವರಿಗೆ ಸಮಾಧಾನವಿರಲಿಲ್ಲ.

    `ತಾನು ಕೇವಲ ರಾಜರ್ಷಿ, ಆದರೆ ವಸಿಷ್ಠರು ಬ್ರಹ್ಮರ್ಷಿ ಎನಿಸಿದ್ದಾರೆ,’ ಎಂದಾಗಿತ್ತು ವಿಶ್ವಾಮಿತ್ರರ ಕೊರಗು. ವಿಶ್ವಾಮಿತ್ರರಿಗೆ ಎಷ್ಟೇ ಸಾಮರ್ಥ್ಯವಿದ್ದರೂ ಬ್ರಹ್ಮಪದವಿಗೆ ಏರಲು ಅವರ ಅಂತರAಗದಲ್ಲಿ ಒಂದು ಮಹಾನ್ ಪರಿವರ್ತನೆ ಆಗಬೇಕಿತ್ತು. ಆದರೆ ಅವರ ಮನಸ್ಸಿನಲ್ಲಿ ವರ್ಧಿಸುತ್ತಿದ್ದುದು ಹಗೆತನವೊಂದೇ. ವಸಿಷ್ಠರ ಕಾಮಧೇನು ತನಗೆ ಬೇಕೆಂದು ಅವರ ಮೇಲೆ ಆಕ್ರಮಣ ಮಾಡಿಯೂ, ವಸಿಷ್ಠರ ನೂರಾರು ಶಿಷ್ಯರ ಸಂಹಾರವನ್ನು ಮಾಡಿಯೂ ವಿಶ್ವಾಮಿತ್ರರ ಮನಸ್ಸಿಗೆ ಶಾಂತಿ ಸಿಕ್ಕಿರಲಿಲ್ಲ.

    ಒಂದು ದಿನ ಸಂಜೆ ಕತ್ತಲಿಳಿದ ಮೇಲೆ, ವಸಿಷ್ಠರನ್ನು ಕೊಂದುಬಿಡುವ ಹುನ್ನಾರದಲ್ಲಿ ವಿಶ್ವಾಮಿತ್ರರು ಆಯುಧ ಹೊತ್ತು ಅವರ ಕುಟೀರಕ್ಕೆ ಬರುತ್ತಾರೆ.

    ಅಂದು ಹುಣ್ಣಿಮೆ. ಕುಟೀರದ ಅಂಗಳದ ಹೂದೋಟದಲ್ಲಿ ವಸಿಷ್ಠರು ತಮ್ಮ ಋಷೀಕ ಪತ್ನಿ ಅರುಂಧತಿಯ ಜೊತೆ ಪ್ರಕೃತಿಯ ಮನೋಹರತೆಯನ್ನು ಆಸ್ವಾದಿಸುತ್ತಾ ಕುಳಿತಿದ್ದರು. ಒಂದು ಹಂತದಲ್ಲಿ ಮೌನವಾಗಿದ್ದ ವಸಿಷ್ಠರನ್ನು ಮಡದಿಯು, “ಏನು ಯೋಚಿಸುತ್ತಿದ್ದೀರಾ?” ಎಂದು ಕೇಳಿದರು.

    “ನಾನು ನನ್ನ ಪ್ರಿಯಮಿತ್ರ ವಿಶ್ವಾಮಿತ್ರನನ್ನು ನೆನೆಯುತ್ತಿದ್ದೇನೆ. ‘ಇಷ್ಟು ಸುಂದರವಾದ ಸಮಯದಲ್ಲಿ ಅವನೂ ಇಲ್ಲಿದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು,’ ಎನ್ನಿಸುತ್ತಿದೆ.”

    ಅರುಂಧತಿ ಕೇಳಿದರು, “ವಿಶ್ವಾಮಿತ್ರರು ತಮ್ಮನ್ನು ಅತ್ಯಧಿಕ ದ್ವೇಷ ಮಾಡುವರು. ಎಲ್ಲರೂ ತಮ್ಮನ್ನು ‘ಬ್ರಹ್ಮರ್ಷಿ’ ಎಂದು ಕರೆಯಲಿ ಎಂದು ಅವರು ಬಯಸುವರು. ಅವರ ಮೇಲೆ ಇಷ್ಟು ಪ್ರೀತಿ ಇರುವುದಾದರೆ, ತಾವು ಹಾಗೆಂದು ಅವರನ್ನು ಕರೆದು, ಅವರ ಮನಸ್ಸಿಗೆ ಸಮಾಧಾನ ನೀಡಬಹುದಲ್ಲ…”

    ವಸಿಷ್ಠರು ವಿವರಿಸುತ್ತಾರೆ, “ಹೌದು, ಮಡದಿ, ಹಾಗೆ ಮಾಡಬಹುದಿತ್ತು. ಆದರೆ ನನಗೆ ವಿಶ್ವಾಮಿತ್ರರ ಮೇಲೆ ನಿಜವಾದ ಪ್ರೇಮವಿದೆ. ಅವರಿಗೆ ಒಳ್ಳೆಯದಾಗಬೇಕು ಎಂಬುದೇ ನನ್ನ ಹಾರೈಕೆ. ವಿಶ್ವಾಮಿತ್ರರು ಇನ್ನು ಕೆಲವೇ ಹಂತ ಮೇಲೇರಬೇಕಿದೆ. ಈಗಲೇ ನಾನೇನಾದರೂ ಬ್ರಹ್ಮರ್ಷಿ ಎಂದು ಅವರನ್ನು ಕರೆದುಬಿಟ್ಟರೆ, ಅದು ಅವರ ಆತ್ಮವಿಕಾಸದಲ್ಲಿ ಬಾಧಕವಾಗುತ್ತದೆ. ಆದ್ದರಿಂದ ಈಗಲೇ ಹಾಗೆ ಕರೆಯಲಾರೆ.”

    ಕತ್ತಲೆಯ ಮರೆಯಲ್ಲಿ ಅಡಗಿದ್ದು ಯಾವುದೇ ಕ್ಷಣ ವಸಿಷ್ಠರ ಮೇಲೆರಗಿ ಅವರ ಹತ್ಯೆ ಮಾಡಬೇಕು ಎಂದು ಕಾದಿದ್ದ ವಿಶ್ವಾಮಿತ್ರರ ಕಿವಿಗೆ ಈ ಮಾತುಗಳು ಬೀಳುತ್ತವೆ. ವಿಶ್ವಾಮಿತ್ರರ ಮೈ ನಡುಗಿಹೋಗುತ್ತದೆ. “ಛೆ! ನನ್ನನ್ನು ಪ್ರೀತಿಯಿಂದ ನೆನೆಯುವ, ನನ್ನ ನಿಜಹಿತವನ್ನು ಬಯಸುವ ಈ ಮಹಾತ್ಮನನ್ನೇ ನಾನು ಹೀಗೆ ದ್ವೇಷಿಸುತ್ತಿರುವುದು?”

    ಆಯುಧವು ಕೆಳಗೆ ಬೀಳುತ್ತದೆ. ಮರೆಯಿಂದ ಹೊರಬಂದು ವಸಿಷ್ಠರ ಮುಂದೆ ಪ್ರಕಟವಾಗಿ, “ನನ್ನನ್ನು ಕ್ಷಮಿಸು! ನಾನು ನಿನ್ನನ್ನು ಮುಗಿಸಲು ಬಂದಿದ್ದೆ!” ಎನ್ನುತ್ತಾ, ಅವರ ಪಾದಗಳಿಗೆ ಎರಗುತ್ತಾರೆ ವಿಶ್ವಾಮಿತ್ರ.

    ದ್ವೇಷ ಹಗೆತನಗಳಿಂದಾಗಿ ವಿಶ್ವಾಮಿತ್ರರು ಕಠಿನಹೃದಯಿಯಾಗಿದ್ದರು. ಈಗವರು ದೀನರಾದರು, ವಿನೀತರಾದರು. ಇದೇ ಅವರಲ್ಲಿ ಆಗಬೇಕಿದ್ದ ಪರಿವರ್ತನೆ. ಈ ಅಂತಿಮ ಪರಿವರ್ತನೆ ಆಗುತ್ತಿದ್ದಂತೆ ವಸಿಷ್ಠರು ಅವರನ್ನು, “ಹೇ ಬ್ರಹ್ಮರ್ಷಿ ವಿಶ್ವಾಮಿತ್ರ!” ಎಂದು ಕರೆದರು!

    ತಪ್ಪಿಗೆ ಪಶ್ಚಾತ್ತಾಪವೇ ಮದ್ದು. ತಪ್ಪೊಪ್ಪಿಕೊಂಡು ಕ್ಷಮೆಯನ್ನು ಯಾಚಿಸುವುದರಿಂದ ಪಾಪ ತೊಳೆದುಹೋಗುತ್ತದೆ. ಅಮ್ಮ ಹೇಳುವರಲ್ಲ, `ಜೀರೋ ಆದವನೇ ಹೀರೋ ಆಗಬಲ್ಲ,’ ಎಂದು!

    ~ ಆಧಾರ

  • ಸರಳ ಸಹಜ ಸುಂದರ ಘನ ಸನಾತನ ಧರ್ಮ

    ಸರಳ ಸಹಜ ಸುಂದರ ಘನ ಸನಾತನ ಧರ್ಮ

    ~ ಬ್ರಹ್ಮಚಾರಿ ಬಿಪಿನ್

    ‘ನಾವು ಆಧುನಿಕತೆಯ ಕದವನ್ನು ತೆರೆದಾಗ, ಅನಂತತೆಯ ಕದವನ್ನು ಮುಚ್ಚಿಕೊಂಡುಬಿಟ್ಟೆವಾ!’ ಎಂದು ಒಬ್ಬ ಹಿರಿಯರು ಆತಂಕದಿಂದ ಹೇಳುವುದನ್ನು ಒಮ್ಮೆ ಕೇಳಿದೆ. ‘ನಮ್ಮ ಪುರಾತನರು ಅನಂತಸತ್ಯದೆಡೆಗೆ ನಾವು ಸಾಗಲು ಉತ್ತಮ ಮಾರ್ಗವನ್ನು ಬಹಳ ಪರಿಶ್ರಮದಿಂದ ರೂಪಿಸಿಟ್ಟಿದ್ದಾರೆ. ಅದು ನಮ್ಮ ಸಂಸ್ಕಾರದಲ್ಲಿ ಪರಂಪರೆಯಾಗಿ ಇಳಿದುಬಂದಿದೆ. ಅವುಗಳೊಂದಿಗೆ ಸಂಪರ್ಕ ಕಡಿದುಕೊಂಡರೆ, ನಾವು ಬಹುಬೇಗ ಅಸ್ವಸ್ಥರಾಗಿ ಒಂಟಿಯಾಗಿಬಿಡುತ್ತೇವೆ.’

    ಕಳೆದವರ್ಷ ಅಮ್ಮನವರ ಜನ್ಮದಿನದ ಸಂದರ್ಭದಲ್ಲಿ ‘ಅಮೃತಕೀರ್ತಿ ಪ್ರಶಸ್ತಿ’ಯನ್ನು ಪಡೆದ ಶ್ರೇಷ್ಠ ಕವಿ ಶ್ರೀ ಮಧುಸೂದನ ನಾಯರ್ ಅವರು ತಮ್ಮ ಪ್ರಶಸ್ತಿ ಸ್ವೀಕಾರ ಭಾಷಣದಲ್ಲಿ ಹೇಳಿದ್ದು ನೆನಪಾಗುತ್ತಿದೆ. “ಕಳೆದ ಎರಡು ಪೀಳಿಗೆಯ ಜನರು ತಪ್ಪಾದ ಚಿಂತನೆಗಳನ್ನು ತಮ್ಮದಾಗಿಸಿಕೊಂಡು, ‘ಹಳೆಯದೆಲ್ಲಾ ಹಳಸಿದ್ದು,’ ಎಂದು ಹೇಳಿ, ನಮ್ಮ ಹಿರಿಯರು ತಮ್ಮ ಸ್ವಂತ ಅನುಭವದಲ್ಲಿ ಕಂಡುಕೊಂಡು, ಅಮೂಲ್ಯವೆಂದು ಕಾಪಾಡಿಕೊಂಡುಬಂದು, `ಮುಂದಿನವರಿಗೆ ಪ್ರಯೋಜನವಾಗಲಿ,’ ಎಂದು, ಉಪದೇಶದ ಮೂಲಕ, ಶಿಕ್ಷಣದ ಮೂಲಕ ಹಾಗೂ ಸೋದಾಹರಣೆಯ ಮೂಲಕ ಕಲಿಸಿದ್ದನ್ನೆಲ್ಲಾ ಗಾಳಿಗೆ ತೂರಿದ್ದಾರೆ.”

    ಮುಂದುವರಿದು, “ಆದರೆ ಕೆಲವೇ ದಶಕಗಳ ಹಿಂದೆ ಹೀಗಿರಲಿಲ್ಲ. ಹಿರಿಯರು ಕಿರಿಯರಿಗೆ ಕಲಿಸುತ್ತಿದ್ದರು. ಹೇಳಿಕೊಡುತ್ತಿದ್ದರು,” ಎಂದರು.

    ಕವಿ ನಾಯರ್ ಅವರು ಒಂದು ಘಟನೆಯನ್ನು ಅಭಿನಯಪೂರ್ವಕ ಪ್ರಸ್ತುತ ಪಡಿಸಿದರು.

    ಭಾಷಣ ಮುಂದುವರಿಸುತ್ತಾ ಕವಿ ನುಡಿದರು, “ಮಾವಿನಹಣ್ಣು ಕೀಳಲು ಹೋದ ಹುಡುಗರಿಗೆ ತಾಯಿ ಇಷ್ಟು ಘನವಿಚಾರಗಳನ್ನು ತಿಳಿಸಿಕೊಟ್ಟು, ಧರ್ಮಾಧರ್ಮಗಳನ್ನು ಕಲಿಸಿದಳು.”

    ಧರ್ಮ ಎಂದರೇನು? “ಧಾರಯತೇ ಇತಿ ಧರ್ಮಃ” ಎಂದಿದೆ ವ್ಯಾಖ್ಯಾನ. ಯಾವುದು ಧರಿಸುತ್ತದೆ, ಹಾಗೂ ಪೊರೆಯುತ್ತದೆ ಅದು ಧರ್ಮ. ‘ಬೃಹತ್ತಾದ ಬ್ರಹ್ಮನಿಂದ ಹಿಡಿದು ತೃಣದ ವರೆಗೆ ಸೃಷ್ಟಿಯಲ್ಲಿರುವ ಪ್ರತಿಯೊಂದನ್ನೂ ಧರಿಸಿಕೊಂಡಿರುವುದು ಧರ್ಮ,’ ಎಂದು ಶಾಸ್ತçಗಳಲ್ಲಿ ಹೇಳಿದೆ.

    ಪ್ರಕೃತಿಯು ಧರ್ಮದ ತತ್ತ್ವಗಳ ಆಧಾರದ ಮೇಲೇ ನಡೆಯುತ್ತಿದೆ. ಉದಾಹರಣೆಗೆ ಮಾವಿನಮರವು ಎಲ್ಲೇ ಇದ್ದರೂ ಅದು ಮಾವಿನಮರದ ಗುಣಗಳಿಗೆ ಅನುಸಾರವಾಗಿಯೇ ಸದಾ ವರ್ತಿಸುತ್ತದೆ.

    ಪ್ರಕೃತಿಯಲ್ಲಿ ಪರಸ್ಪರ ಕೊಡು-ಕೊಳೆ ಇರುತ್ತದೆ. ಪರಸ್ಪರ ತ್ಯಾಗ ಮತ್ತು ಸ್ವೀಕಾರಗಳಿರುತ್ತದೆ. ಪಡೆಯಬಯಸುವವನು ನೀಡಲೂ ಸಿದ್ಧನಿರಬೇಕು. ಇದೇ ರೀತಿ, ಧರ್ಮವೂ; ನಾವು ಅದನ್ನು ಪೋಷಿಸಿದರೆ ಮಾತ್ರವೇ ಅದು ನಮ್ಮನ್ನು ರಕ್ಷಿಸಬಲ್ಲದು ಎಂದು ತಿಳಿಯಬೇಕು. ಇದನ್ನೇ ‘ಧರ್ಮೋ ರಕ್ಷತಿ ರಕ್ಷಿತಃ’ ಎನ್ನುವುದು.

    ನಾವು ಧರ್ಮವನ್ನು ಹೇಗೆ ರಕ್ಷಿಸಬೇಕು? ಧರ್ಮವನ್ನು ಪಾಲಿಸುವುದರ ಮೂಲಕ. ನಾವು ಧರ್ಮವನ್ನು ಪಾಲಿಸಿದರೆ ಧರ್ಮ ಉಳಿಯುತ್ತದೆ, ಮತ್ತು ಮುಂದುವರೆಯುತ್ತದೆ. ನಾವು ಕಟ್ಟಿದ ಮನೆ ನಮಗೆ ಸುರಕ್ಷಿತತೆ ನೀಡುತ್ತದೆಯಲ್ಲವೆ? ಹಾಗೆ.

    ನಾವು ಹಿರಿಯ ಪೀಳಿಗೆಯವರೇ ಇಡೀ ಸೃಷ್ಟಿಯನ್ನು ನಡೆಸುತ್ತಿರುವ ಈ ಧರ್ಮವನ್ನು ಕಡೆಗಾಣಿಸಿದರೆ, ಅದರ ಪ್ರತಿ ಅವಜ್ಞೆ ತೋರಿದರೆ, ಅದು ಬಹುಬೇಗ ಇತರರ ಮನೋಭಾವವಾಗಿಬಿಡುತ್ತದೆ. ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗಬೇಕಾದ ಯುವಜನತೆಯೇ ಧರ್ಮವನ್ನು ಅರಿಯದೇ, ಅಥವಾ ಅರಿಯಲು ಪ್ರಯತ್ನಿಸದೇ ಅವಜ್ಞೆ ಮಾಡುತ್ತಿರುವುದು ನೋಡಿದರೆ, ಸೂತ್ರ ಕತ್ತರಿಸಿಕೊಂಡ ಗಾಳಿಪಟ ಎತ್ತ ಹಾರಿ, ಕಡೆಗೆ ಯಾವ ಮುಳ್ಳುಕಂಟಿಗಳ ಮೇಲೆ ಬೀಳುತ್ತದೆಯೋ?! ಎಂದು ಭಯವಾಗುತ್ತದೆ.

    ಸನಾತನ ಧರ್ಮವು ಯಾವುದೇ ಒಂದು ಗ್ರಂಥದ ಮೇಲೆ ನಿಂತಿರುವ ರಿಲೀಜಿಯನ್ ಅಲ್ಲ. ಮತವಲ್ಲ. ಸ್ವಾಮಿ ಚಿನ್ಮಯಾನಂದರನ್ನು ವಿದೇಶದಲ್ಲಿ ಯಾರೋ ಕೇಳಿದರಂತೆ, “ನಿಮ್ಮ ಮತದ ಆಧಾರಗ್ರಂಥ ಯಾವುದು?” ಎಂದು. ಸ್ವಾಮೀಜಿ ಹೇಳಿದರಂತೆ, “ಸನಾತನ ಧರ್ಮದಲ್ಲಿ ಒಂದಲ್ಲ, ಅನೇಕ ಶಾಸ್ತçಗ್ರಂಥಗಳ ಗ್ರಂಥಾಲಯವೇ ಇದೆ.” ಹಾಗಾಗಿ ಸನಾತನವಾದ ಹಿಂದೂಧರ್ಮವನ್ನು ಮತ ಎನ್ನಲಾಗದು; ಇದನ್ನು ಇತರ ಮತ ಅಥವಾ ರಿಲೀಜಿಯನ್ ಜೊತೆಗೆ ಹೋಲಿಸಲೂ ಆಗದು. ಇದು ಎಲ್ಲೂ ಯಾವುದಕ್ಕೂ ಸೀಮಿತವಾಗಿಲ್ಲ; ವೈಶಾಲ್ಯತೆಯೇ ಇದರ ಹೆಗ್ಗುರುತು. ಹಾಗಾಗಿ ಇಷ್ಟು ಉದಾತ್ತವಾದ ಸನಾತನ ಧರ್ಮವನ್ನು ಹಾಗೂ ಈ ಸಂಸ್ಕಾರವನ್ನು ನಾವು ಪಾಲಿಸಿ, ರಕ್ಷಿಸಿ, ಪೋಷಿಸಬೇಕಿದೆ.

    ಧರ್ಮಕ್ಕೆ ಗ್ರಾಹ್ಯವಾದ ಯಾವುದೇ ರೂಪವಿಲ್ಲ. ಅದು ನಮ್ಮೆಲ್ಲರಲ್ಲಿ, ನಮ್ಮ ಮನೋಭಾವದಲ್ಲಿ, ನಮ್ಮ ಆಚರಣೆಯಲ್ಲಿ ಅಂತರ್ಗತವಾಗಿದೆ. ಧರ್ಮದ ಉನ್ನತಿಗಾಗಲೀ ಅಧೋಗತಿಗಾಗಲೀ ನಾವೇ ಕಾರಣರು. ನಮ್ಮ ಮನೋಭಾವ, ನಮ್ಮ ಕ್ರಿಯೆಗಳೇ ಕಾರಣಗಳು.

    ಇದಕ್ಕೆ ಉದಾಹರಣೆಯಾಗಿ ಅಮ್ಮನ ಈ ಮಾತುಗಳನ್ನು ಉದ್ದರಿಸುತ್ತೇನೆ: “ಒಂದು ವೇಳೆ ಪ್ರಕೃತಿಯು ವಿನಾಶವನ್ನು ಹೊಂದಿದರೆ ಮನುಷ್ಯನ ಅಸ್ತಿತ್ವವೇ ಕಡೆಯಾಗುತ್ತದೆ. ಆದರೆ ಮನುಷ್ಯನೇನಾದರೂ ಪೂರ್ತಿ ನಿರ್ನಾಮವಾದರೆ ಆಗ ಪ್ರಕೃತಿಯು ಅನತಿಕಾಲದಲ್ಲೇ ಚೇತರಿಸಿಕೊಂಡು, ಸಮೃದ್ಧವಾಗುತ್ತದೆ.”

    ಇಂದಿನ ನಮ್ಮ ಅನೇಕ ಸಮಸ್ಯೆಗಳಿಗೆ ಕಾರಣ ನಾವೀ ಧಾರ್ಮಿಕ ಸಂಸ್ಕಾರವನ್ನು ದೂರಮಾಡಿರುವುದೇ ಆಗಿದೆ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಕುಟುಂಬ ವ್ಯವಸ್ಥೆಯದು; ಧರ್ಮಬದ್ಧರಲ್ಲದ ಜನರ ನಡುವೆ ಮನುಷ್ಯಸಹಜ ಸ್ನೇಹ, ಸೌಹಾರ್ದ, ಬಂಧುಬಾಂಧವ ಭಾವಗಳೇ ಇಲ್ಲವಾಗಿವೆ; ಇದು ವೈಮನಸ್ಯ, ಅಶಾಂತಿ, ಹಿಂಸಾಚಾರಗಳಿಗೆ ಕಾರಣವಾಗಿವೆ.

    ನಾವು ನಮ್ಮ ಮೂಲಗಳಿಗೆ ಹೋಗಲೇ ಬೇಕಿದೆ. ಬೇರೆ ಯಾವುದೇ ಸಂಸ್ಕಾರದಲ್ಲಿ ಒಳಿತನ್ನು ಕಂಡುಹಿಡಿದು ಒಪ್ಪಿಕೊಳ್ಳಲು ಸಿದ್ಧವಿರುವ ನಾವು ನಮ್ಮದೇ ಮೂಲವನ್ನು ಹೊರಳಿನೋಡಲು ಹಿಂಜರಿಯಬಾರದು.

    ಧರ್ಮವನ್ನು ಸ್ವೀಕರಿಸುವ ಜನರು ಕಾಲದೇಶಗಳಿಗೆ ಅನುಸಾರವಾಗಿ ಬದಲಾವಣೆಗಳನ್ನು ಅಳವಡಿಸಿಕೊಳ್ಳಲು ಸಿದ್ಧರಿರುತ್ತಾರೆ; ಧರ್ಮವನ್ನು ವಿರೋಧಿಸಲು ನಿರ್ಧರಿಸಿಕೊಂಡವರಲ್ಲಿ ಧರ್ಮಾಚರಣೆಯ ಯಾವುದೋ ಕಾಲದೇಶದ ಕುಂದುಕೊರತೆಗಳನ್ನು ಎತ್ತಿ, ಇಡೀ ಧರ್ಮವನ್ನು ಹೀಗಳೆಯುವ ಪ್ರವೃತ್ತಿ ಕಂಡುಬರುತ್ತದೆ. ನಮಗೆ ಇಂದಿಗೆ ಸೂಕ್ತವಲ್ಲದ ವಿಚಾರವನ್ನು, ‘ಹಿಂದೊಂದು ಕಾಲದಲ್ಲಿ ಹೀಗಿತ್ತು,’ ಎಂಬ ಸೂಕ್ತ ವಿವೇಚನೆಯಿಂದ ಮನಗಂಡು, ಅದನ್ನು ಪಕ್ಕಕ್ಕಿಟ್ಟು, ಸಕಾರಾತ್ಮಕವಾಗಿ ‘ನಾವು ಆಧುನಿಕತೆಯ ಕದವನ್ನು ತೆರೆದಾಗ ಅನಂತತೆಯ ಕದವನ್ನು ಮುಚ್ಚಿಕೊಂಡುಬಿಟ್ಟೆವಾ!’ ಮುಂದುವರಿಯಬಹುದು. ಉದಾಹರಣೆಗೆ ‘ಮನು ಸ್ತ್ರೀಯು ಸ್ವಾತಂತ್ರ್ಯಕ್ಕೆ ಅರ್ಹಳಲ್ಲ! ಎಂದಿದ್ದಾನೆ!’ ಎಂದು ರೋಷದ ಆಕ್ಷೇಪ ಆಗಾಗ ಅಲ್ಲಲ್ಲಿ ಕೇಳಿಬರುತ್ತಿರುತ್ತದೆ.

    ಅಸಂಖ್ಯಾತ ಶಾಸ್ತçಗ್ರಂಥಗಳ ಗ್ರಂಥಾಲಯದಲ್ಲಿ ಒಂದು ಪುಸ್ತಕದಲ್ಲಿ ಒಬ್ಬಾತ ಹೀಗೆ ಹೇಳಿದ್ದರೆ, ಅದನ್ನು ಟೀಕೆಯ ಅಸ್ತçವಾಗಿ ಬಳಸುವ ಬದಲು, ಆ ಮಾತನ್ನು ನಿಜಕ್ಕೂ ತೀಕ್ಷ್ಣ ವಿಶ್ಲೇಷಣೆಗೆ ಒಳಪಡಿಸಬಹುದು: ಮನು ಅಂದರೆ ಯಾರು?  ಸ್ಮೃತಿ ಎಂದರೆ ಏನು? ಯಾವ ಕಾಲಘಟ್ಟದಲ್ಲಿ, ಯಾವ ಸಮಾಜದಲ್ಲಿ ಹಾಗಿತ್ತು? ಎಲ್ಲೆಡೆಯೂ ಹಾಗಿತ್ತೇ? ಅಥವಾ ಅವನ ಕಾಲದೇಶದಲ್ಲಿ ಹಾಗಿತ್ತೆ? ಅದು ನಿಯಮವಾಗಿತ್ತೆ ಅಥವಾ ಅಪವಾದವೆ? ಆ ನುಡಿಗಳ ಅರ್ಥ ಇಂದು ಕೊಂಚ ಬೇರೆಯಾಗಿರಬಹುದೆ? -ಎಂದು ಸ್ಟಡಿ ಮಾಡಬೇಕು. ಗ್ರಂಥಗಳು ಲಭ್ಯವಿವೆ!

    ಅಮ್ಮನ ಈ ಎರಡೂ ನುಡಿಗಳನ್ನು ಸೇರಿಸಿದಾಗ ನನಗೆ ಅಮ್ಮನದೇ ಆದ ಈ ನುಡಿಗಳು ನೆನಪಾಗುತ್ತವೆ, “ಮಕ್ಕಳೆ! ಅವಶ್ಯಕತೆ ಇರುವಷ್ಟನ್ನು ಮಾತ್ರ ತೆಗೆದುಕೊಳ್ಳುವುದೇ ಧರ್ಮ.”

    ಈ ಮಾತು ನಮ್ಮ ಜೀವನದ ಎಲ್ಲಾ ರಂಗಗಳಿಗೆ ಅನ್ವಯಿಸುತ್ತದೆ. ಎಲ್ಲ ಜೀವಿಗಳಿಗೂ ಶ್ರೇಷ್ಠನೆನಿಸಿದ ನಾವು ಮನುಷ್ಯರು ಈಶ್ವರ, ಪ್ರಕೃತಿ, ಎಲ್ಲಾ ಜೀವಿಗಳೂ -ಇವರ ನಡುವಿನ ಪರಸ್ಪರ ಸಂಬಂಧದ ಬಗ್ಗೆ ಬೋಧವಂತರಾಗಬೇಕು.

  • ಶಿವರಾತ್ರಿ

    ಶಿವರಾತ್ರಿ

    ಅಮ್ಮ ಹೇಳುತ್ತಾರೆ

    ಅತ್ಯಂತ ಮಂಗಳಕರವಾದ ರಾತ್ರಿ ಎಂದರೆ ಅದು ಶಿವರಾತ್ರಿ. ತ್ಯಾಗ, ತಪಸ್ಸು, ವ್ರತ, ಭಕ್ತಿ, ಜ್ಞಾನ -ಇವೆಲ್ಲಾ ಸೇರಿದ ಹಬ್ಬವಾಗಿದೆ ಶಿವರಾತ್ರಿ.  

    ಇದೆಲ್ಲದರ ಜೊತೆ ಶಿವನನ್ನು ಆರಾಧಿಸಿ ನಾವು ಪರಮವಾದುದನ್ನು ಪಡೆಯುತ್ತೇವೆ. ಅಂದರೆ ನಾವು ಈಶ್ವರನಲ್ಲಿ ಒಂದಾಗುತ್ತೇವೆ.

    ರಾತ್ರಿ ಎಂದರೆ ಲೋಕದ ಪಾಲಿಗೆ ಆರಾಮವಾಗಿ ವಿಶ್ರಾಮ ಮಾಡುವ ಸಮಯ. ಆದರೆ ಭಕ್ತನ ಪಾಲಿಗೆ ರಾತ್ರಿಯು ಈಶ್ವರ ಸ್ಮರಣೆಗೆ ಅತ್ಯಂತ ಪ್ರಶಸ್ತವಾದ ಸಮಯ.

    ಶಿವರಾತ್ರಿಯಲ್ಲಿ ಪ್ರಧಾನ ಅನುಷ್ಠಾನವೆಂದರೆ ಊಟ ನಿದ್ರೆಗಳನ್ನು ಬಿಡುವುದು. ಶರೀರಧರ್ಮಗಳಾದ ಹಸಿವು ದಾಹಗಳನ್ನು ಜಯಿಸಿ, ಅಜ್ಞಾನವೆಂಬ ನಿದ್ರೆಗೆ ಜಾರಿ ಬೀಳದೆ, ನಿಜಜ್ಞಾನದ ಎಚ್ಚರದಲ್ಲಿ ರಾತ್ರಿಯನ್ನು ಕಳೆಯುವುದೇ ಶಿವರಾತ್ರಿ.

    ಹೆಚ್ಚಿನ ಜನರು ಲೋಕ ನೀಡುವ ಅಲ್ಪ ಸಂತೋಷದಿಂದ ತೃಪ್ತರಾಗುತ್ತಾರೆ. ಅದೇ ತಮಗೆ ದೊರಕಬಹುದಾದ ಉನ್ನತ ಸಂತೋಷ ಎಂದುಕೊಳ್ಳುತ್ತಾರೆ. ಆದರೆ ಇಂದ್ರಿಯಗಳನ್ನೂ ಮನಸ್ಸನ್ನೂ ಅಂಕೆಯಲ್ಲಿಟ್ಟುಕೊಂಡರೆ, ಅದಕ್ಕೂ ಹೆಚ್ಚಿನ ಸುಖಶಾಂತಿಗಳು ಲಭಿಸುತ್ತವೆ.

    ವ್ರತಾನುಷ್ಠಾನಗಳು ಆ ಪರಮಸುಖದ ಬಾಗಿಲನ್ನು ತೆರೆಯುವ ಕೀಲಿಕೈಗಳಾಗಿವೆ. ಇಂದ್ರಿಯಗಳು ಅಲ್ಪಸುಖವನ್ನು ಮಾತ್ರವೇ ತರಬಲ್ಲವು. ಅದನ್ನು ಅನುಭವಿಸಬಾರದು ಎಂದಲ್ಲ. ಅದನ್ನು ಅನುಭವಿಸುವಾಗ, ಅದನ್ನು ಒದಗಿಸಿದ ಈಶ್ವರನ ಪ್ರತಿ ಧನ್ಯವಾದದ ಭಾವವಿರಬೇಕು. ಯಾಕೆಂದರೆ ಯಾವುದಕ್ಕೂ ನಮಗೆ ಕೃಪೆ ಇರಬೇಕು. ಒಂದು ಹಾಡು ಕೇಳಬೇಕೆಂದರೂ ಆಲಿಸುವ ಸಾಮರ್ಥ್ಯ ಕಿವಿಗೆ ಇರಬೇಕು. ಕಿವುಡರಿಗೆ ಹಾಡು ಕೇಳಿಸುವುದಿಲ್ಲ. ಎಷ್ಟೇ ಸುಂದರವಾದ ಜಲಪಾತವು ಎದುರಿಗಿದ್ದರೂ, ಅಂಧರಿಗೆ ಅದು ಕಾಣಿಸುವುದಿಲ್ಲ. ಹೀಗೆ ಏನನ್ನು ಆಸ್ವಾದಿಸಬೇಕೆಂದರೂ ಈಶ್ವರಾನುಗ್ರಹ ಇರಬೇಕು. ‘ಕೃಪೆಯಿಂದಾಗಿಯೇ ಅದು ದೊರಕಿದ್ದು,’ ಎಂದು ನೆನೆದು, ಎಲ್ಲದರ ಬಗ್ಗೆ ಧನ್ಯತಾಭಾವ ಬೆಳೆಸಿಕೊಳ್ಳಬೇಕು. ಅದೇ ಸಮಯದಲ್ಲಿ ನಾವು ಲೋಕದ ಸ್ವಭಾವವನ್ನು ಮರೆಯದೇ, ‘ಆಸ್ವಾದಿಸುವ ವಸ್ತು ಅಶಾಶ್ವತ,’ ಎಂದು ನೆನೆದಿರಬೇಕು.

  • ಭಾರತೀಯ ಕಾಲಮಾನ :       ಶಿಶಿರ ಋತು

    ಭಾರತೀಯ ಕಾಲಮಾನ : ಶಿಶಿರ ಋತು

    ಗ್ರೆಗೋರಿಯನ್ ಕ್ಯಾಲಂಡರ್ ಪ್ರಕಾರ ಇರುವ ೧೨ ಮಾಸಗಳಲ್ಲಿ ಫೆಬ್ರವರಿ ಅತ್ಯಂತ ಚಿಕ್ಕದು. ಇತರ ಮಾಸಗಳಲ್ಲಿ ೩೦ ಅಥವಾ ೩೧ ದಿನಗಳಿದ್ದರೆ, ಫೆಬ್ರವರಿಗೆ ೨೮ ದಿನಗಳು ಮಾತ್ರ. ಆದರೆ ೪ ವರ್ಷಗಳಿಗೊಮ್ಮೆ ಒಂದು ಹೆಚ್ಚಿನ ದಿನವನ್ನು ಪಡೆಯುವ ಭಾಗ್ಯವೂ ಈ ಮಾಸಕ್ಕೇ ದೊರೆತಿದೆ. ಅದರಿಂದಾಗಿ ಆ ವರ್ಷಕ್ಕೆ ಅಧಿಕವರ್ಷ (ಲೀಪ್ ಇಯರ್) ಎನ್ನುತ್ತಾರೆ. ಪಾಶ್ಚಿಮಾತ್ಯ ಕಾಲಮಾನದ ಈ ಅಡ್ಜಸ್ಟ್ ಮೆಂಟ್ ತೀರಾ ಇತ್ತೀಚೆಗೆ ಎಂದರೆ ೧೬ನೇ ಶತಮಾನದಲ್ಲಿ ಆದದ್ದು.

    ಸನಾತನ ಭಾರತದ ಕಾಲಮಾನವಾದರೋ ಅತ್ಯಂತ ಪ್ರಾಚೀನವೂ, ಅತ್ಯಂತ ನಿಖರವೂ ಆಗಿದೆ. ಭೂಗೋಳದ ಉತ್ತರ ಭಾಗದಲ್ಲಿರುವ ಭಾರತದಲ್ಲಿ ಉತ್ತರಾಯಣ- ದಕ್ಷಿಣಾಯನಗಳ ಒಂದು ವರ್ಷದ ಕಾಲಾವಧಿಯನ್ನು ವಸಂತ, ಗ್ರೀಷ್ಮ, ವರ್ಷ, ಶರತ್, ಹೇಮಂತ ಮತ್ತು ಶಿಶಿರ ಋತುಗಳೆಂದು ವಿಭಜಿಸಲಾಗಿದೆ. ಯುಗಾದಿಗೆ ಹಳೆಯ ಸಂವತ್ಸರವೂ, ಶಿಶಿರ ಋತುವೂ ಕಡೆಯಾಗುವುದು; ಯುಗಾದಿಯಿಂದ ಹೊಸವರ್ಷವೂ ವಸಂತ ಋತುವೂ ಆರಂಭವಾಗುವುದು.

    ಹಾಗಾಗಿ ನಮಗೆ ಫೆಬ್ರವರಿಯು, ಅರ್ಧ ತಿಂಗಳು ಚಳಿಗಾಲವೆನ್ನುವ ಶಿಶಿರ ಋತುವೂ, ಇನ್ನರ್ಧ ತಿಂಗಳು ಸಂತಸಮಯ ವಸಂತ ಋತುವೂ ಇರುವ ಮಾಸ.

    ಪ್ರಸಿದ್ಧ ಕವಿಯೊಬ್ಬ ಮ್ಲಾನವದನನಿಗೆ, “ವಸಂತ ಬಂತೆಂದರೆ ಇನ್ನು ಶಿಶಿರ ದೂರವಿರುವುದೇನು?” ಎನ್ನುತ್ತಾ ಉತ್ಸಾಹ ತುಂಬುತ್ತಾನೆ.

  • ಶಿವರಾತ್ರಿ

    ಶಿವರಾತ್ರಿ

    ಅಮ್ಮ ಹೇಳುವರು :

    ಅತ್ಯಂತ ಮಂಗಳಕರವಾದ ರಾತ್ರಿ ಎಂದರೆ ಅದು ಶಿವರಾತ್ರಿ. ತ್ಯಾಗ, ತಪಸ್ಸು, ವ್ರತ, ಭಕ್ತಿ, ಜ್ಞಾನ -ಇವೆಲ್ಲಾ ಸೇರಿದ ಹಬ್ಬವಾಗಿದೆ ಶಿವರಾತ್ರಿ. ಇದೆಲ್ಲದರ ಜೊತೆ ಶಿವನನ್ನು ಆರಾಧಿಸಿ ನಾವು ಪರಮವಾದುದನ್ನು ಪಡೆಯುತ್ತೇವೆ. ಅಂದರೆ ನಾವು ಈಶ್ವರನಲ್ಲಿ ಒಂದಾಗುತ್ತೇವೆ.

    ರಾತ್ರಿ ಎಂದರೆ ಲೋಕದ ಪಾಲಿಗೆ ಆರಾಮವಾಗಿ ವಿಶ್ರಾಮ ಮಾಡುವ ಸಮಯ. ಆದರೆ ಭಕ್ತನ ಪಾಲಿಗೆ ರಾತ್ರಿಯು ಈಶ್ವರ ಸ್ಮರಣೆಗೆ ಅತ್ಯಂತ ಪ್ರಶಸ್ತವಾದ ಸಮಯ. ಶಿವರಾತ್ರಿಯಲ್ಲಿ ಪ್ರಧಾನ ಅನುಷ್ಠಾನವೆಂದರೆ ಊಟ ನಿದ್ರೆಗಳನ್ನು ಬಿಡುವುದು. ಶರೀರಧರ್ಮಗಳಾದ ಹಸಿವು ದಾಹಗಳನ್ನು ಜಯಿಸಿ, ಅಜ್ಞಾನವೆಂಬ ನಿದ್ರೆಗೆ ಜಾರಿ ಬೀಳದೆ, ನಿಜಜ್ಞಾನದ ಎಚ್ಚರದಲ್ಲಿ ರಾತ್ರಿಯನ್ನು ಕಳೆಯುವುದೇ ಶಿವರಾತ್ರಿ.

    ಹೆಚ್ಚಿನ ಜನರು ಲೋಕ ನೀಡುವ ಅಲ್ಪ ಸಂತೋಷದಿಂದ ತೃಪ್ತರಾಗುತ್ತಾರೆ. ಅದೇ ತಮಗೆ ದೊರಕಬಹುದಾದ ಉನ್ನತ ಸಂತೋಷ ಎಂದುಕೊಳ್ಳುತ್ತಾರೆ. ಆದರೆ ಇಂದ್ರಿಯಗಳನ್ನೂ ಮನಸ್ಸನ್ನೂ ಅಂಕೆಯಲ್ಲಿಟ್ಟುಕೊಂಡರೆ, ಅದಕ್ಕೂ ಹೆಚ್ಚಿನ ಸುಖಶಾಂತಿಗಳು ಲಭಿಸುತ್ತವೆ. ವ್ರತಾನುಷ್ಠಾನಗಳು ಆ ಪರಮಸುಖದ ಬಾಗಿಲನ್ನು ತೆರೆಯುವ ಕೀಲಿಕೈಗಳಾಗಿವೆ.

    ಇಂದ್ರಿಯಗಳು ಅಲ್ಪಸುಖವನ್ನು ಮಾತ್ರವೇ ತರಬಲ್ಲವು. ಅದನ್ನು ಅನುಭವಿಸಬಾರದು ಎಂದಲ್ಲ. ಅದನ್ನು ಅನುಭವಿಸುವಾಗ, ಅದನ್ನು ಒದಗಿಸಿದ ಈಶ್ವರನ ಪ್ರತಿ ಧನ್ಯವಾದದ ಭಾವವಿರಬೇಕು. ಯಾಕೆಂದರೆ ಯಾವುದಕ್ಕೂ ನಮಗೆ ಕೃಪೆ ಇರಬೇಕು. ಒಂದು ಹಾಡು ಕೇಳಬೇಕೆಂದರೂ ಆಲಿಸುವ ಸಾಮರ್ಥ್ಯ ಕಿವಿಗೆ ಇರಬೇಕು. ಕಿವುಡರಿಗೆ ಹಾಡು ಕೇಳಿಸುವುದಿಲ್ಲ. ಎಷ್ಟೇ ಸುಂದರವಾದ ಜಲಪಾತವು ಎದುರಿಗಿದ್ದರೂ, ಅಂಧರಿಗೆ ಅದು ಕಾಣಿಸುವುದಿಲ್ಲ.

    ಹೀಗೆ ಏನನ್ನು ಆಸ್ವಾದಿಸಬೇಕೆಂದರೂ ಈಶ್ವರಾನುಗ್ರಹ ಇರಬೇಕು. ‘ಕೃಪೆಯಿಂದಾಗಿಯೇ ಅದು ದೊರಕಿದ್ದು,’ ಎಂದು ನೆನೆದು, ಎಲ್ಲದರ ಬಗ್ಗೆ ಧನ್ಯತಾಭಾವ ಬೆಳೆಸಿಕೊಳ್ಳಬೇಕು. ಅದೇ ಸಮಯದಲ್ಲಿ ನಾವು ಲೋಕದ ಸ್ವಭಾವವನ್ನು ಮರೆಯದೇ, ‘ಆಸ್ವಾದಿಸುವ ವಸ್ತು ಅಶಾಶ್ವತ,’ ಎಂದು ನೆನೆದಿರಬೇಕು.  

  • ಅಮ್ಮನ ಸಂದೇಶ

    ಅಮ್ಮನ ಸಂದೇಶ

    ಪ್ರತಿಯೊಬ್ಬರೂ ಎಲ್ಲರಿಗಾಗಿ! ಎಲ್ಲರೂ ಪ್ರತಿಯೊಬ್ಬರಿಗಾಗಿ!” ಮಕ್ಕಳೆ, ಈ ಭಾವದಲ್ಲಿ ನಾವು ಜೀವನ ಸಾಗಿಸಬೇಕು.

    ೨೧ನೇ ಶತಮಾನದ ಕಾಲುಭಾಗ ಮುಗಿಯುವ ಈ ಹೊತ್ತು ನಮ್ಮ ಲೋಕದ ಅವಸ್ಥೆ ಏನಾಗಿದೆ? ಕೆಲವೆಡೆ ಜನರ ನಡುವಿನ ಕಲಹಗಳಿಂದ ಜನ ಕಷ್ಟಪಡುತ್ತಿದ್ದಾರೆ. ಇನ್ನು ಕೆಲವೆಡೆ ಅಧಿಕಾರಕ್ಕಾಗಿ ಸಂಘರ್ಷಗಳು ನಡೆದಿವೆ. ಮತ್ತೆ ಕೆಲವೆಡೆ, ಯುದ್ಧದ ಭೀತಿಯಿಂದ, ವಿನಾಶದಿಂದ ಜನ ನಲುಗುತ್ತಿದ್ದಾರೆ. ಕೆಲವೆಡೆ ಆತಂಕವಾದಿಗಳ ಹಿಡಿತದಲ್ಲಿ ಜನ ಸಿಲುಕಿದ್ದಾರೆ. ಆ ಸ್ಥಳಗಳಲ್ಲಿ ಹೆಣ್ಣುಮಕ್ಕಳು, ಸಣ್ಣಮಕ್ಕಳು ಹಾಗೂ ಮಹಿಳೆಯರು ಅಪಾರ ಕಷ್ಟಗಳಿಗೆ ಸಿಕ್ಕಿರುತ್ತಾರೆ. ಕೆಲವು ದೇಶಗಳಲ್ಲಿ ಊಟ ಸಿಗದೆ, ಹಸಿವಿನಿಂದ ಕಂಗಾಲಾದ ಕೂಸುಗಳು ತಮ್ಮ ಕೈಯನ್ನೇ ಕಡಿದುಕೊಳ್ಳುತ್ತಿವೆ. ಹೀಗೆ, ರೋಗ, ಹಸಿವು, ಅಸಹಾಯಕತೆ- ನಿಲ್ಲದ ಕಣ್ಣೀರು, ಮುಗಿಯದ ವೇದನೆ. ಇದೇ ಇಂದಿನ ಲೋಕದ ಭೀಕರವಾದ ಅವಸ್ಥೆ.

    ಲೋಕದ ವಿವಿಧ ಭಾಗಗಳಲ್ಲಿ ಸುಮಾರು ೨೦೦ ಕೋಟಿ ಜನರಾದರೂ ಇಂಥ ವಿವಿಧ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಈ ದೃಷ್ಟಿಯಿಂದ ನೋಡಿದಾಗ, “ಪ್ರತೀಕ್ಷೆಗಳೆಲ್ಲಾ ನಿರಾಶೆಯಲ್ಲಿ ಮುಗಿಯುತ್ತಿವೆಯೇ!” ಎಂದು ಭಯವಾಗುತ್ತದೆ. ಇವತ್ತಿಗೂ ಸಹ ಮನುಷ್ಯರು ಪರಸ್ಪರರನ್ನು ಅರ್ಥಮಾಡಿಕೊಳ್ಳಲಾಗದೆ ಕಲಹಕ್ಕಿಳಿಯುತ್ತಾರೆ. ಹೀಗಿರುವಾಗ `ಪರಿಸ್ಥಿತಿಯಲ್ಲಿ ಬದಲಾವಣೆ ತರಲು ನಾವೇನು ಮಾಡಬಹುದು?’ ಎಂದು ಚಿಂತಿಸಬೇಕು. ಸಾಧ್ಯವಾದುದನ್ನು ಮಾಡಲೇಬೇಕು. ಅದು ಚಿಕ್ಕದೇ ಆದರೂ ಸಹ. ಒಬ್ಬರ ಕಣ್ಣೀರನ್ನು ಒರೆಸಲು ಸಾಧ್ಯವಿದ್ದರೆ, ನಾವು ಹಾಗೆ ಮಾಡಲೇ ಬೇಕು.

    ನಾವು ಒಳ್ಳೆಯ ಚಿಂತೆಗಳನ್ನು ಬೆಳೆಸಿಕೊಳ್ಳಬೇಕು. ಒಂದು ಪ್ರಯತ್ನದಲ್ಲಿ ತೊಡಗುತ್ತೇವೆ; ಆಗ ನಮ್ಮ ಉಪಬೋಧ ಮನಸ್ಸಿನಲ್ಲಿ ಸೋಲು ಗೆಲವುಗಳ ಬಗ್ಗೆ ಸಂಕಲ್ಪಗಳು ಏಳುತ್ತವೆ. ಆ ಸಂಕಲ್ಪಗಳು ನಮ್ಮ ಯಶಸ್ಸಿಗೆ ಬಹುಪಾಲು ಕೊಡುಗೆ ನೀಡುತ್ತವೆ. ಉಪಬೋಧ ಮನಸ್ಸಿನಲ್ಲಿ ಶುಭಪ್ರತೀಕ್ಷೆಗಳಿದ್ದರೆ ವಿಜಯದ ಸಾಧ್ಯತೆ ಹೆಚ್ಚಿಗಿರುತ್ತದೆ. ಉಪಬೋಧ ಮನಸ್ಸಿನಲ್ಲಿ ಶುಭಪ್ರತೀಕ್ಷೆಯನ್ನು ಹೆಚ್ಚಿಸಿಕೊಳ್ಳಲು ಮಾರ್ಗ ಯಾವುದು? ಒಂದೇ ಮಾರ್ಗ: ಬೋಧಮನಸ್ಸಿನಲ್ಲಿ ಸುಪ್ರತೀಕ್ಷೆಗಳನ್ನು, ಸಕಾರಾತ್ಮಕ ಚಿಂತೆಗಳನ್ನು ಹೆಚ್ಚಿಸಿಕೊಳ್ಳಬೇಕು. ಆಗ, ಕ್ರಮೇಣ ಉಪಬೋಧ ಮನಸ್ಸಿನಲ್ಲೂ ಒಳ್ಳೆಯ ಚಿಂತೆಗಳು ತುಂಬುವುವು. ಆಗ ನಮ್ಮ ವಿಜಯದ ಸಾಧ್ಯತೆಗಳು ಹಲವುಪಟ್ಟು ಹೆಚ್ಚುತ್ತವೆ. ಆದ್ದರಿಂದ ಬೋಧಮನಸ್ಸಿನಲ್ಲಿ ನಾವು ಸದಾ ಕಾಲ ಒಳ್ಳೆಯ ಚಿಂತೆಗಳನ್ನು ಬೆಳೆಸಿಕೊಳ್ಳಬೇಕು. ಕ್ಯಾಲಿಫೋರ್ನಿಯಾದಲ್ಲಿ ದೊಡ್ಡ ಕಾಡ್ಗಿಚ್ಚು ಹತ್ತಿತು. ಎಕರೆಗಟ್ಟಲೆ ಕಾಡು ಬೂದಿಯಾಯಿತು. ಆದರೆ ಆ ಬೂದಿಯಿಂದಲೇ ಸಣ್ಣ ಪುಟ್ಟ ಗಿಡಗಳು ಮೇಲೆದ್ದು, ಹೂವು ಬಿರಿಯತೊಡಗಿದವು. ಅವು ಬಹುವಿಶೇಷವಾದ ಗಿಡಗಳು. ಶಾಖ ಹೊಗೆ ಇವಿರುವ ಕಡೆ ಮಾತ್ರ ಈ ಬೀಜ ಮೊಳೆತು ಗಿಡವಾಗುವುದು!

    ಹೀಗೆ, ಅಡಚಣೆಗಳಿಗೆ ನಮ್ಮ ಆಂತರಿಕ ಶಕ್ತಿಯನ್ನು ಜಾಗೃತಮಾಡುವ ಸಾಮರ್ಥ್ಯವಿದೆ. ನಿಜವಾದ ಶಕ್ತಿವಂತರು ಯಾರೆಂದು ಅವು ತೋರಿಸುತ್ತವೆ. ಅಡಚಣೆ ಎದುರಾದಾಗ ದುರ್ಬಲರು ಬೀಳುವರು. ಧೈರ್ಯವಂತರಾದರೋ ಅಡಚಣೆಯನ್ನೇ ಯಶಸ್ಸಿಗೆ ಮೆಟ್ಟಿಲಾಗಿಸಿಕೊಳ್ಳುವರು. ಕಷ್ಟಗಳಿಂದ ನಾವು ಪಾಠ ಕಲಿಯಬಹುದು. ಉದಾಹರಣೆಗೆ -ಅಗತ್ಯವಿರುವುದನ್ನು ತೆಗೆದುಕೊಳ್ಳುವುದು, ಆಸೆಗಳ ಬೆನ್ನುಹತ್ತದಿರುವುದು -ಇದನ್ನು ಕಲಿಯುತ್ತೇವೆ. ಆಧ್ಯಾತ್ಮ ಪಾಲಿಸುವವರು ಹಾಗೇ ಮಾಡುವರು. ಎಲ್ಲದಕ್ಕೂ ಧನ್ಯವಾದ ಹೇಳುತ್ತಾ ಮುಂದೆಮುಂದೆ ಸಾಗುವರು. ತೆಗೆದುಕೊಳ್ಳುವಾಗ ‘ಧನ್ಯವಾದ!’ ಹೇಳುವರು. ಕೊಡುವಾಗಲೂ ‘ಧನ್ಯವಾದ!’ ಹೇಳುವರು. ಇದು ಹೀಗೇ ಒಂದು ಧನಾತ್ಮಕ ಶೃಂಖಲೆಯಾಗಿ ಮುಂದುವರಿಯುತ್ತದೆ.

  • ಸಂಪಾದಕೀಯ

    ‘ಕನ್ನಡ ಮಾತೃವಾಣಿ’ಗೆ ೨೮ ವರ್ಷ ತುಂಬಿತು.

    ‘ಕನ್ನಡ ಮಾತೃವಾಣಿ’ ಎಂದೇಕೆ ಹೇಳುವುದು? ‘ಮಾತೃವಾಣಿ’ ಎಂದರೆ ಸಾಕಿತ್ತಲ್ಲ!?

    ಇಲ್ಲ. ಸಾಲದು. ‘ಮಾತೃವಾಣಿ’ ಎಂಬುದು ಒಟ್ಟು ೭ ವಿದೇಶಿ ಭಾಷೆಗಳಲ್ಲಿ ಮತ್ತು ೧೦ ಭಾರತೀಯ ಭಾಷೆಗಳಲ್ಲಿ ಹೊರಬರುತ್ತಿರುವ ಆಧ್ಯಾತ್ಮಿಕ ಪತ್ರಿಕೆಯಾಗಿದೆ. ಅವುಗಳಲ್ಲಿ ಕನ್ನಡ ಪತ್ರಿಕೆಯೂ ಒಂದು.

    ಪ್ರತಿಯೊಂದು ಭಾಷೆಯ ಪತ್ರಿಕೆಯ ಒಕ್ಕಣೆಯಲ್ಲಿ ವೈವಿಧ್ಯತೆಯಿರುತ್ತದೆ, ಆಯಾ ಭಾಷೆ ಪ್ರಾಂತ್ಯಗಳಿಗೆ ಅದು ಅನುಯೋಜ್ಯವಾಗಿರುತ್ತದೆ. ಆದ್ದರಿಂದ ‘ಕನ್ನಡ ಮಾತೃವಾಣಿ’ ‘ಮಲಯಾಳಂ ಮಾತೃವಾಣಿ,’ ‘ಇಂಗ್ಲೀಷ್ ಮಾತೃವಾಣಿ’ ‘ಜಪಾನೀಸ್ ಮಾತೃವಾಣಿ’ ‘ಫ್ರೆಂಚ್ ಮಾತೃವಾಣಿ’ ಎಂದು ಪ್ರತ್ಯೇಕವಾಗಿ ಹೇಳಲೇಬೇಕಾಗಿದೆ.

    ಈಗಾದರೋ ಜನರ ಕೈಯಲ್ಲಿ ಮೊಬೈಲ್ ಇರುತ್ತದೆ; ಜಗತ್ತಿನ ಯಾವ ಭಾಷೆಯಲ್ಲಿ ಬೇಕಾದರೂ, ಜಗತ್ತಿನಲ್ಲಿ ಯಾರೊಂದಿಗೆ ಬೇಕಾದರೂ ಲೈವ್ ಸಂಪರ್ಕ ಹೊಂದಬಹುದು. ಆದರೆ ದಶಕಗಳ ಹಿಂದೆಯೇ ಕೇರಳದ ಪರ್ಯಾಯದ್ವೀಪವೊಂದರ ಕುಗ್ರಾಮವೊಂದರಲ್ಲಿ -ಇಂದಿನ ಅಮೃತಪುರಿಯಲ್ಲಿ- ಪ್ರಿಂಟಿಂಗ್ ಪ್ರೆಸ್ ಇತ್ತು, ಅದು ಪರಮಪೂಜ್ಯ ಅಮ್ಮನವರ ಸಂದೇಶವನ್ನು ಹಲವಾರು ಭಾಷೆಗಳ ಪತ್ರಿಕೆಯ ಮುಖಾಂತರ ಲೋಕಕ್ಕೆ ಪ್ರಸಾರ ಮಾಡುತ್ತಲಿತ್ತು ಎಂದರೆ ನಿಮಗೆ ಅಚ್ಚರಿಯಾಗದೆ?

    ‘ಮಾತೃವಾಣಿ’ ಪತ್ರಿಕೆ ಮಾತ್ರವಲ್ಲ. ಅಮ್ಮನ ಭಜನೆಗಳನ್ನು ವಿವಿಧ ಲಿಪಿಗಳಲ್ಲಿ ಹಾಗೂ ಭಜನೆಗಳ ಅರ್ಥವನ್ನು ವಿವಿಧ ಭಾಷೆಗಳ ಪುಸ್ತಕಗಳಾಗಿ ಆಶ್ರಮದ ಪ್ರೆಸ್ಸು ಅಂದೇ ವಿಪುಲವಾಗಿ ಪ್ರಕಟಿಸುತ್ತಿತ್ತು. ಗುರುವಾಗಿ ಅಮ್ಮ ನೀಡುವ ಬೋಧನೆಯ ಸಂಕಲನಗಳನ್ನೂಅಂದೂ ಪ್ರಕಟಿಸುತ್ತಿತ್ತು, ಇಂದೂ ಪ್ರಕಟಿಸುತ್ತಿದೆ.

    ಕಾಲ ಬದಲಾದಂತೆ ಅಮ್ಮನ ಸಂಕಲ್ಪಕ್ಕೆ ಅನುಸಾರವಾಗಿ ಸಂದೇಶ, ಭಜನೆ, ಉಪದೇಶಗಳೆಲ್ಲವೂ ಮುದ್ರಣ ಮಾಧ್ಯಮದಲ್ಲಿ ಮಾತ್ರವಲ್ಲದೆ, ಇಂದಿನ ವಿವಿಧ ವಿದ್ಯುನ್ಮಾನ ಮಾಧ್ಯಮಗಳ ಮುಖಾಂತರವೂ ಜನತೆಯನ್ನು ತಲುಪುತ್ತಿವೆ.

    ‘ಮಾತೃವಾಣಿ’ ಪತ್ರಿಕೆ ಸಹ ಆನ್-ಲೈನ್ ಲಭ್ಯವಿದೆ. ಸದಸ್ಯತ್ವ ಪಡೆದು, ಅಮ್ಮನ ಸತ್ಸಂಗ ಸಂದೇಶಗಳ ಲಾಭಾರ್ಥಿ ನೀವಾಗಿರಿ.

     ~ ಸಂಪಾದಕ ವರ್ಗ

  • ಭಗವಂತನ ಕಡೆಗಿನ ಕರ್ತವ್ಯ

    ಭಗವಂತನ ಕಡೆಗಿನ ಕರ್ತವ್ಯ

    ಮಕ್ಕಳೇ, ಭಗವಂತನು ನಮ್ಮನ್ನು ರಕ್ಷಿಸುತ್ತಾನೆಯೇ ಹೊರತು. ನಾವು ಭಗವಂತನನ್ನು ರಕ್ಷಿಸುವವರಲ್ಲ.

    ಮಕ್ಕಳೇ, ನದಿಗೆ ನೀರಿನ ಅಗತ್ಯವಿಲ್ಲ. ಆದರೆ ಮಡಕೆಗೆ ನದಿಯ ನೀರಿನ ಅಗತ್ಯವಿದೆ. ಆಗಲೇ ಮಡಕೆ ಶುದ್ಧವಾಗುತ್ತದೆ. ನಮ್ಮ ಮನಸ್ಸು ಇಂದು ಕಳಂಕಗಳಿಂದ ತುಂಬಿದ ಮಡಕೆಯಾಗಿದೆ. ಭಗವಂತನೆಂಬ ನದಿಯಲ್ಲಿನ ನೀರನ್ನು ತುಂಬಿಸಿಯೇ ನಮ್ಮ ಮನಸ್ಸೆಂಬ ಮಡಕೆಯನ್ನು ಶುದ್ಧಗೊಳಿಸಬೇಕು. ಕಳಂಕಗಳಿಂದ ತುಂಬಿದ ಮನಸ್ಸನ್ನು ಶುದ್ಧೀಕರಿಸಿ ವಿಶಾಲಗೊಳಿಸಲು, ಹಾಗೂ ನಾವು ಎಲ್ಲರನ್ನೂ ಪ್ರೀತಿಸಿ, ನಿಸ್ವಾರ್ಥ ಸೇವೆ ಸಲ್ಲಿಸಲು ಸಾಧ್ಯವಾಗಬೇಕಾದರೆ, ನಮಗೆ ಭಗವಂತನ ಕೃಪೆ ಅತ್ಯಗತ್ಯ.

    ಮಕ್ಕಳೇ, ಈ ಲೋಕದಲ್ಲಿ ನಮ್ಮ ಪ್ರಧಾನ ಕರ್ತವ್ಯವೆಂದರೆ, ಅಸಹಾಯಕರಿಗೆ ನೆರವು ನೀಡುವುದು. ಭಗವಂತನಿಗೆ ನಮ್ಮಿಂದ ಏನೂ ಬೇಕಿಲ್ಲ. ಆತ ಸದಾ ಸಂಪೂರ್ಣ. ಭಗವಂತನಿಗೆ ಏನಾದರೂ ಅಗತ್ಯವಿದೆ ಎಂದು ಭಾವಿಸುವುದು, ಸೂರ್ಯನಿಗೆ ಮೇಣದಬತ್ತಿಯ ಬೆಳಕನ್ನು ತೋರಿಸಿ, ‘ಸೂರ್ಯಭಗವಾನನೇ, ನನ್ನ ಬೆಳಕಿನಲ್ಲಿ ಭೂಮಿಯನ್ನು ಪ್ರಕಾಶಗೊಳಿಸು’ ಎಂದು ಹೇಳುವಂತೆ.

    ಬಡಜನರ ಮತ್ತು ಕಷ್ಟದಲ್ಲಿರುವವರೊಡನೆ  ಸಹಾನುಭೂತಿಯಿಂದ ವರ್ತಿಸುವುದೇ, ಭಗವಂತನಿಗೆ ನಾವು ಸಲ್ಲಿ‌ಸುವ ಕರ್ತವ್ಯ. ನಿಸ್ವಾರ್ಥ ಲೋಕಸೇವೆಯೇ ಆತ್ಮಾನ್ವೇಷಣೆಯ ಪ್ರಾರಂಭ. ಮೂರನೇ ಕಣ್ಣು ತೆರೆಯಲು, ಎರಡು ಕಣ್ಣುಗಳನ್ನು ಮುಚ್ಚಿ ಅನೇಕರು ಧ್ಯಾನ ಮಾಡುತ್ತಾರೆ. ಅದು ಎಂದಿಗೂ ಆಗುವುದಿಲ್ಲ. ಆಧ್ಯಾತ್ಮಿಕತೆಯ ಹೆಸರಿನಲ್ಲಿ ಈ ಲೋಕದತ್ತ ಕಣ್ಣು ಮುಚ್ಚಿಕೊಳ್ಳಲು ಸಾಧ್ಯವಿಲ್ಲ. ಯಾವುದೇ ಪ್ರಗತಿಯೂ ಆಗುವುದಿಲ್ಲ. ಎರಡೂ ಕಣ್ಣು ತೆರೆದಿರುವಾಗಲೇ ಎಲ್ಲದರಲ್ಲೂ ಏಕತ್ವವನ್ನು ಕಾಣುವುದೇ ಆತ್ಮಸಾಕ್ಷಾತ್ಕಾರ, ಅಥವಾ ಆಧ್ಯಾತ್ಮಿಕ ಪೂರ್ಣತೆ. ಅದೇ ಮೂರನೇ ಕಣ್ಣು.

    ಮೊಗ್ಗಾಗಿರುವಾಗ ಒಂದು ಹೂವಿನ ಸೌಂದರ್ಯವನ್ನು ಮತ್ತು ಸುಗಂಧವನ್ನು ಯಾರೂ ತಿಳಿಯಲು ಅಥವಾ ಆಸ್ವಾದಿಸಲು ಸಾಧ್ಯವಿಲ್ಲ. ಆದರೆ ಹೂವು ಅರಳಿದಾಗ ಅದರ ಕಾಂತಿಯೂ ಸುವಾಸನೆಯೂ ಸುತ್ತಲೂ ಹರಡುತ್ತದೆ. ನಮ್ಮ ಹೃದಯ ಈಗ ಮೊಗ್ಗಿನಂತೆ ಮುಚ್ಚಿಕೊಂಡು ಕುಳಿತಿದೆ. ಭಗವಂತನಲ್ಲಿ ಶ್ರದ್ಧಾಭಕ್ತಿ, ಎಲ್ಲರ ಬಗ್ಗೆ ತೋರುವ ಪ್ರೇಮ ಮತ್ತು ಕರುಣೆ, ಧಾರ್ಮಿಕ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಈ ಹೃದಯದ ಹೂವು ಅರಳಿ ವಿಕಾಸಗೊಳ್ಳುತ್ತದೆ. ಅದರ ಸುಗಂಧ ಮತ್ತು ಸೌಂದರ್ಯ ಸುತ್ತಲೂ ಹರಡಿ ಇಡೀ ಜಗತ್ತಿಗೆ ಒಂದು ವರವಾಗಿ ಪರಿಣಮಿಸುತ್ತದೆ.

    ಇಲ್ಲಿಯವರೆಗೆ ನಾನು ಹೇಳಿದ್ದೆಲ್ಲವೂ ಟಾನಿಕ್ ಶೀಶೆಯ ಲೇಬಲ್ ಮಾತ್ರ. ಲೇಬಲ್ ಓದಿದ ಮಾತ್ರಕ್ಕೇ ‘ಟಾನಿಕ್’ ನ ಫಲ ಸಿಗುವುದಿಲ್ಲ. ಅದನ್ನು ಸೇವಿಸಿದಾಗ ಮಾತ್ರ ಅದರ ಫಲ ಸಿಗುವುದು. ಕಾಗದದ ಮೇಲೆ ಜೇನುತುಪ್ಪ ಎಂದು ಬರೆದು ನೆಕ್ಕಿದರೆ ಸಿಹಿ ಸಿಗುವುದಿಲ್ಲ. ವಿಜ್ಞಾನವನ್ನು ಅಧ್ಯಯನ ಮಾಡಿದ ಮಾತ್ರಕ್ಕೇ ಅನುಭವ ಉಂಟಾಗುವುದಿಲ್ಲ. ಧರ್ಮವನ್ನು ಮಾತಿನಿಂದ ಹೇಳಲಾಗದು. ಅದು ಜೀವನಶೈಲಿ. ಅದರ ಸೌಂದರ್ಯವು ಧಾರ್ಮಿಕವಾಗಿ  ಜೀವಿಸುವವರ ಮೂಲಕ ಪ್ರಕಟವಾಗುತ್ತದೆ. ಧಾರ್ಮಿಕ ತತ್ವಗಳನ್ನು ಧ್ಯಾನಿಸಬೇಕು. ಜೀವನದಲ್ಲಿ ಅಳವಡಸಿಕೊಳ್ಳಬೇಕು. ಅವುಗಳನ್ನು ಅನುಭವದಿಂದ ಅರಿತುಕೊಳ್ಳಬೇಕು. ಪರಮಾತ್ಮನಲ್ಲಿ ಸಂಪೂರ್ಣ ಶರಣಾಗತಿಯಿಂದ  ಆ ಪರಮ ಪದವನ್ನು ಹೊಂದಲು ಎಲ್ಲರಿಗೂ ಸಾಧ್ಯವಾಗಲಿ ಎಂದು ನಾವು ಪ್ರಾರ್ಥಿಸೋಣ.